Advertisement

ಹತ್ತಕ್ಕೆ ಏಳು ಚಿತ್ರಗಳ ಬಿಡುಗಡೆ

01:22 PM Nov 06, 2017 | Team Udayavani |

2017 ಮುಗಿಯುತ್ತಾ ಬಂದಿದೆ. ಈಗ ಸಿನಿಮಾಗಳ ಬಿಡುಗಡೆಯ ಪರ್ವ. ಹಾಗಾಗಿ ಕನ್ನಡ ಪ್ರೇಕ್ಷಕನಿಗೆ ಮತ್ತೊಂದು ಸಿನಿಮಾ ಹಬ್ಬ ಕಣ್ಣ ಮುಂದಿದೆ! ಹೀಗೆಂದಾಕ್ಷಣ, ಹೊಸದೊಂದು ಚಿತ್ರೋತ್ಸವ ಏನಾದರೂ ಶುರುವಾಗುತ್ತಾ ಅನ್ನೋ ಯೋಚನೆ ಬೇಡ. ಯಥಾ ಪ್ರಕಾರ ಈ ವಾರ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ ಅನ್ನೋದೇ ವಿಶೇಷ. ಈಗ ಸದ್ಯಕ್ಕಂತೂ ಸ್ಟಾರ್‌ ಸಿನಿಮಾಗಳ್ಯಾವೂ ಇಲ್ಲ.

Advertisement

ಹಾಗಾಗಿ ಹೊಸಬರ ಚಿತ್ರಗಳೆಲ್ಲವು ಬಿಡುಗಡೆಯ ಸಾಲಿನಲ್ಲಿ ಬಂದು ನಿಂತಿವೆ. ಕಳೆದ ಒಂದು ತಿಂಗಳಿನಿಂದಲೂ ಬಿಡುಗಡೆಗೆ ಕಾದು ನಿಂತಿದ್ದ ಚಿತ್ರಗಳೆಲ್ಲವೂ ಒಂದೊಂದೇ ವಾರ ಪ್ರೇಕ್ಷಕನ ಎದುರು ಬರುತ್ತಿವೆ. ಚಿತ್ರಗಳ ಬಿಡುಗಡೆ ವೇಗ ಕೂಡ ಜೋರಾಗಿದೆ. ಇತ್ತೀಚೆಗೆ ಸೂಕ್ಷ್ಮವಾಗಿ ಗಮನಿಸಿದರೆ, ವಾರಕ್ಕೆ ಏನಿಲ್ಲವೆಂದರೂ, ನಾಲ್ಕು, ಐದು, ಆರು ಚಿತ್ರಗಳು ತೆರೆ ಕಾಣುತ್ತಲೇ ಬಂದಿವೆ.

ಆದರೆ, ಗಟ್ಟಿಯಾಗಿ ಚಿತ್ರಮಂದಿರದಲ್ಲಿ ನಿಂತ ಸಿನಿಮಾಗಳು ಮಾತ್ರ ಬೆರಳೆಣಿಕೆಯಷ್ಟು. ಅವುಗಳನ್ನು ಹೊರತುಪಡಿಸಿದರೆ, ವಾರಕ್ಕೆ ಐದಾರು ಚಿತ್ರಗಳು ಹೀಗೆ ಬಂದು, ಹಾಗೆ ಹೋಗುತ್ತಲೇ ಇವೆ. ನವೆಂಬರ್‌ 10 ರಂದು ಬರೋಬ್ಬರಿ ಏಳು ಚಿತ್ರಗಳು ಅಧಿಕೃತವಾಗಿ ಬಿಡುಗಡೆಯಾಗುವುದನ್ನು ಖಚಿತಪಡಿಸಿವೆ. ಒಮ್ಮೆಲೆ ಏಳು ಚಿತ್ರಗಳು ತೆರೆಗೆ ಬರುತ್ತಿರುವ ಕುರಿತು ಒಂದು ರೌಂಡಪ್‌.

ಕಾಲೇಜ್‌ ಕುಮಾರ್‌: ಈ ವಾರ “ಸಂಯುಕ್ತ 2′, “ಕಾಲೇಜ್‌ ಕುಮಾರ್‌’, “ಸೈಕೋ ಶಂಕ್ರ’, “ರಾಜರು’, “ನುಗ್ಗೇ ಕಾಯಿ’, “ಅರ್ಧ ತಿಕ್ಲು ಅರ್ಧ ಪುಕ್ಲು’ ಮತ್ತು “ಬಿಕೋ’ ಎಂಬ ಚಿತ್ರಗಳು ತೆರೆಗೆ ಬರುತ್ತಿವೆ. ಈ ಪೈಕಿ ಹೊಸಬರ ಚಿತ್ರಗಳ ಸಂಖ್ಯೆಯೇ ಹೆಚ್ಚು. ಹರಿ ಸಂತೋಷ್‌ ನಿರ್ದೇಶನದ “ಕಾಲೇಜ್‌ ಕುಮಾರ್‌’ ಚಿತ್ರದಲ್ಲಿ “ಕೆಂಡ ಸಂಪಿಗೆ’ ಖ್ಯಾತಿಯ ವಿಕ್ಕಿ ಹಾಗು ಸಂಯುಕ್ತಾ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಇದರ ಇನ್ನೊಂದು ವಿಶೇಷವೆಂದರೆ, ಮೊದಲ ಬಾರಿಗೆ ರವಿಶಂಕರ್‌ ಮತ್ತು ಶ್ರುತಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಈಗಿನ ಕಾಲಕ್ಕೆ ಸರಿಹೊಂದುವ ಕಥೆ. ನಾಯಕ ವಿಕ್ಕಿ, “ಕೆಂಡ ಸಂಪಿಗೆ’ ಬಳಿಕ ಸುಮಾರು 50 ಕಥೆ ಕೇಳಿದ್ದರಂತೆ. ಆದರೆ, ಕೇಳಿದ ಯಾವ ಕಥೆಗಳೂ ಅವರಿಗೆ ಇಷ್ಟವಾಗಿರಲಿಲ್ಲ. ಆದರೆ, “ಕಾಲೇಜ್‌ ಕುಮಾರ್‌’ ಕಥೆ ಕೇಳಿದಾಕ್ಷಣ, ಅವರು ಮಿಸ್‌ ಮಾಡಲಿಲ್ಲ.

Advertisement

ಅಂದಹಾಗೆ, ಈ ಚಿತ್ರದಲ್ಲಿ ಭಾವನೆಗಳಿವೆ, ಭಾವುಕತೆಯೂ ಇದೆ. ಪ್ರೀತಿ, ನೋವು, ನಲಿವು, ತಳಮಳ ಎಲ್ಲವೂ ಅಡಗಿದೆ ಎಂಬುದು ಚಿತ್ರತಂಡದವರ ಮಾತು. ಅದೇನೆ ಇರಲಿ, ಈ ವಾರ ತೆರೆ ಕಾಣುತ್ತಿರುವ ಈ ಚಿತ್ರಕ್ಕೆ ಕೆನಡಿ ಕ್ಯಾಮೆರಾ ಹಿಡಿದರೆ, ಅರ್ಜುನ್‌ ಜನ್ಯ ಸಂಗೀತವಿದೆ. ಪದ್ಮನಾಭ್‌ ನಿರ್ಮಾಪಕರು.

ಸೈಕೋ ಶಂಕ್ರ: ಪುನೀತ್‌ ಆರ್ಯ ನಿರ್ದೇಶನದ “ಸೈಕೋ ಶಂಕ್ರ’ ಚಿತ್ರದಲ್ಲಿ ನವರಸನ್‌ ಸೈಕೋಶಂಕ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಕ್ರಿಮಿನಲ್‌ ಕುರಿತಾದ ಕಥೆ. 19 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಆರೋಪಿಯಾಗಿರುವ ಸೈಕೋ ಶಂಕ್ರನಂತೆ ಇನ್ನೂ ಕೆಲವು ವ್ಯಕ್ತಿಗಳಿದ್ದು, ಅಂತಹ ವ್ಯಕ್ತಿತ್ವಗಳು ಕಾಣಿಸಿಕೊಂಡಾಗ, ಸಮಾಜ ಅವರನ್ನು ಏನು ಮಾಡುತ್ತದೆ ಎಂಬುದು ಕಥೆಯ ಒನ್‌ಲೈನ್‌.

ಸಹಜವಾಗಿ ಇದು ಕ್ರಿಮಿನಲ್‌ ಸುತ್ತ ಸಾಗುವ ಸಿನಿಮಾ ಆಗಿದ್ದರೂ, ಇಲ್ಲಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಅಂಶಗಳಿವೆ ಎಂಬುದು ಚಿತ್ರತಂಡದವರ ಹೇಳಿಕೆ. ಚಿತ್ರದಲ್ಲಿ ಪ್ರಣವ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರಿಲ್ಲಿ ಹಳ್ಳಿಯೊಂದರ ಮುಗ್ಧ ಮತ್ತು ರಗಡ್‌ ಲುಕ್‌ನಲ್ಲಿರುವ ಪಾತ್ರಧಾರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶರತ್‌ ಲೋಹಿತಾಶ್ವ, ಯಶಸ್‌ ಸೂರ್ಯ, ರಿಷಿಕಾ ಶರ್ಮ, ಅಮೃತಾರಾವ್‌, ವೇದಶ್ರೀ ಇತರರು ನಟಿಸಿದ್ದಾರೆ. ಪ್ರಭು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿಬಸ್ರೂರ್‌ ಸಂಗೀತವಿದೆ. ನಿತಿನ್‌ ಛಾಯಾಗ್ರಾಹಕರಾದರೆ, ವಿಶ್ವ ಸಂಕಲನವಿದೆ.

ರಾಜರು: ಗಿರೀಶ್‌ ಮೂಲಿಮನಿ ನಿರ್ದೇಶನದ “ರಾಜರು’ ಕೂಡ ಈ ವಾರ ತೆರೆಗೆ ಬರುತ್ತಿದೆ. ನಿರಂಜನ್‌ ಶೆಟ್ಟಿ ಚಿತ್ರದ ಹೀರೋ. ಇವರೊಂದಿಗೆ ಪೃಥ್ವಿ, ಶರಣ್‌ರಾಜ್‌ ಹಾಗೂ ಜಗದೀಶ್‌ ಹೀರೋಗಳಾಗಿ ನಟಿಸುತ್ತಿದ್ದಾರೆ. ಇದೊಂದು ನಾಲ್ವರು ಹುಡುಗ ನಡುವೆ ನಡೆಯುವ ಕಥೆ. “ಅರಮನೆ ಇಲ್ಲ ರಾಣಿ ಹುಡುಕ್ತಾವ್ರೆ’ ಎಂಬ ಅಡಿಬರಹ ನೋಡಿದರೆ, ಇದು ಪಕ್ಕಾ ಲೋಕಲ್‌ ಹುಡುಗರು ಹುಡುಗಿಯೊಬ್ಬಳ ಹಿಂದೆ ಹೋಗುವ ಮನರಂಜನೆಯ ವಿಷಯಗಳು ಇಲ್ಲಿವೆ ಎಂಬುದನ್ನು ಹೇಳುತ್ತೆ.

ಅಂದಹಾಗೆ, ಚಿತ್ರಕ್ಕೆ  ಎಂ.ಮೂರ್ತಿ, ಟಿ.ಶಿವಕುಮಾರ್‌, ಹೆಚ್‌.ರಮೇಶ್‌,ವಿ.ಜೆ.ಚಂದ್ರಶೇಖರ್‌ ಅವರು  ನಿರ್ಮಾಪಕರು. ಶ್ರೀಧರ್‌ ವಿ.ಸಂಭ್ರಮ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಟೆಕ್‌ ಸೂರಿ ಕ್ಯಾಮೆರಾ ಹಿಡಿದಿದ್ದಾರೆ. ಡಿಫ‌ರೆಂಟ್‌ ಡ್ಯಾನಿ ಸಾಹಸವಿದೆ. ನಾಗೇಂದ್ರಪ್ರಸಾದ್‌,ಜಯಂತ್‌ ಕಾಯ್ಕಿಣಿ, ಯೋಗರಾಜ್‌ಭಟ್‌ ಅವರ ಸಾಹಿತ್ಯವಿದೆ.

ಸಂಯುಕ್ತ  2: ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ “ಸಂಯುಕ್ತ 2′ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚೇತನ್‌ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ನೇಹಾಪಾಟೀಲ್‌ ಮತ್ತು ಐಶ್ವರ್ಯ ಸಿಂಧೋಗಿ ನಾಯಕಿಯರು. ಇದೊಂದು ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದೆ. ಈ ಚಿತ್ರವನ್ನು  ಡಾ.ಮಂಜುನಾಥ್‌ ನಿರ್ಮಿಸಿದ್ದಾರೆ. ಅಭಿರಾಮ್‌ ಚಿತ್ರದ ನಿರ್ದೇಶಕರು. ರವಿಚಂದ್ರ ಅವರ ಸಂಗೀತ ಚಿತ್ರಕ್ಕಿದೆ.

ನುಗ್ಗೇಕಾಯಿ: ವೇಣುಗೋಪಾಲ್‌ ನಿರ್ದೇಶಿಸಿರುವ “ನುಗ್ಗೇಕಾಯಿ’ ಈ ವಾರ ತೆರೆಗೆ ಬರುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಹಾಸ್ಯಪ್ರಧಾನ ಕಥೆ ಹೊಂದಿರುವ ಚಿತ್ರ. ಪ್ರೀತಂ ಎಸ್‌ ಹೆಗಡೆ ಕಥೆ, ಚಿತ್ರಕಥೆ ಬರೆದು ನಿರ್ಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ  ಈಗಿನ ಯುವ ಪೀಳಿಗೆ ಹೇಗೆ ಹಾಳಾಗುತ್ತಿದ್ದಾರೆ ಎಂಬುದು ಚಿತ್ರದ ಒನ್‌ಲೈನ್‌.

ಚಿತ್ರದಲ್ಲಿ ಮಧುಸೂದನ್‌, ಎಸ್ತರ್‌ನರೋನಾ, ಕ್ರಿಸ್ಟಿನಾ ಜಾಯ್‌, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರ್ಯಕಾಂತ್‌ ಹೊನ್ನಾಳಿ ಛಾಯಾಗ್ರಹಣವಿದೆ. ಸುರೇಶ್‌ ಬಿ.ಎಸ್‌.ವಿ ಸಾಹಿತ್ಯ ಮತ್ತು ಸಂಗೀತವಿದೆ. ಶಿವಪ್ರಸಾದ್‌ ಯಾದವ್‌ ಸಂಕಲನವಿದೆ. ಮಾದೇಶ್‌ ಮುತ್ತಪ್ಪಸಂಭಾಷಣೆ ಬರೆದಿದ್ದರೆ. ಚಿತ್ರದಲ್ಲಿ ಉದಿತ್‌, ಮುಕುಂದ, ಬ್ಯಾಂಕ್‌ ಜನಾರ್ಧನ್‌, ಬಿರಾದರ್‌, ನಯನಾ, ಜನಿಫ‌ರ್‌ ಆಂಟೋನಿ ಇತರರು ನಟಿಸಿದ್ದಾರೆ.

ಬಿಕೋ: “ಬಿಕೋ’ ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಚಿತ್ರ. ರೇವಣ್ಣ ನಿರ್ಮಾಣದ ಈ ಚಿತ್ರವನ್ನು ಸಂದೀಪ್‌ ದಕ್‌Ò ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಅವರದೇ. ಇದೊಂದು ಲವ್‌, ಆ್ಯಕ್ಷನ್‌, ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರ. ಚಿತ್ರಕ್ಕೆ ಕುಮಾರ ಕ್ಯಾಮೆರಾ ಹಿಡಿದರೆ, ಪೀಟರ್‌ ಎಸ್‌.ಜೋಸೆಫ್ ಸಂಗೀತ ನೀಡಿದ್ದಾರೆ.

ಅರುಣ್‌ಶೆಟ್ಟಿ ಸಂದೀಪ್‌ ಸಾಹಿತ್ಯವಿದೆ. ಮೈಸೂರು ಕುಮಾರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಬ್ರಮಣ್ಯ ಸಾಹಸವಿದೆ. ಜಾಯ್‌ ತೇಜ, ರಾಮಕೃಷ್ಣ ಮತ್ತು ಅನಿತಾ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರೇವ, ರಿಷಿತಾ ಮಲ್ನಾಡ್‌, ರಾಕ್‌ಲೈನ್‌ ಸುಧಾಕರ್‌, ಸಿದ್ದರಾಜು ಸುಧಾ ಪ್ರಸನ್ನ, ಮೈಸೂರು ಬಾಲಣ್ಣ, ಮಹದೇವೇಗೌಡ, ಯೋಗೀಶ್‌, ಪ್ರಮೀಳಾ ಇತರರು ನಟಿಸಿದ್ದಾರೆ. 

ಇನ್ನು ಹೊಸಬರ “ಅರ್ಧ ತಿಕ್ಲು ಅರ್ಧ ಪುಕ್ಲು’ ಚಿತ್ರ ಕೂಡ ನವೆಂಬರ್‌ 10 ರಂದು ಬಿಡುಗಡೆಯಾಗುತ್ತಿದೆ. ಅದೇನೆ ಇರಲಿ, ಸ್ಟಾರ್‌ ಸಿನಿಮಾಗಳು ಇಲ್ಲ ಅನ್ನುವ ಕಾರಣಕ್ಕೆ, ಒಂದಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಇವಿಷ್ಟರಲ್ಲಿ ಯಾವ ಚಿತ್ರ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next