Advertisement
ಜಿಲ್ಲಾ ಕೋವಿಡ್ ಆಸ್ಪತ್ರೆಯ, ಕೋವಿಡ್ ನೋಡೆಲ್ ಅಧಿಕಾರಿಯಾಗಿರುವ ಅರವಳಿಕೆ ತಜ್ಞ ಡಾ. ಮಹೇಶ್, ಸಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷ, ವೈದ್ಯರಾದ ಡಾ. ದಮಯಂತಿ, ಡಾ. ಗಿರೀಶ್ ಪಾಟೀಲ್, ಡಾ. ಶಶಾಂಕ್, ಡಾ. ನವೀನ್‌ಚಂದ್ರ, ಡಾ. ಚೇತನ್ ಅವರಿಗೆ ಕಳೆದ 7 ದಿನಗಳ ಅಂತರದಲ್ಲಿ ಕೋವಿಡ್ ಪಾಸಿಟಿವ್ ಆಗಿದೆ.
Related Articles
Advertisement
ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರೂ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ. ಮಹೇಶ್, ನಾವು ಇದೀಗ ಕೋವಿಡ್ ಲಸಿಕೆ ಪಡೆದಿದ್ದೇವೆ. ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕವಷ್ಟೇ ಅದು ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಡೋಸ್ ಲಸಿಕೆ ಪಡೆದವರು, ತಮಗೆ ಕೋವಿಡ್ ಬರುವುದಿಲ್ಲ ಎಂದು ಮೈಮರೆಯುಂತಿಲ್ಲ ಎಂದರು.
ಇನ್ನು ಮೂರು ದಿನಗಳಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಶೂನ್ಯ ರೋಗಿ!: ಈ ನಡುವೆ ಇನ್ನೊಂದು ಸಮಾಧಾನಕರ ಸಂಗತಿ ಎಂದರೆ ಎರಡು ಮೂರು ದಿನಗಳಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆ ಕೋವಿಡ್ ರೋಗಿಗಳಿಂದ ಮುಕ್ತವಾಗಲಿದೆ. ಪ್ರಸ್ತುತ ಮೂವರು ಕೋವಿಡ್ ಪಾಸಿಟಿವ್ ಹೊಂದಿರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಗುಣಮುಖರಾಗುತ್ತಿದ್ದು ಇನ್ನು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಪ್ರಸ್ತುತ 17 ಮಂದಿ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ 21 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಮಹಾನ್ ವಂಚಕ ಯುವರಾಜನ ಮತ್ತೂಂದು ದೋಖಾ ಬಯಲು
ನೆಗೆಟಿವ್ ಆದರೂ ಕೋವಿಡ್ ಲಕ್ಷಣ: ಉಸಿರಾಟದ ತೊಂದರೆ ಮತ್ತು ಸುಸ್ತಿನ ಕಾರಣ ಜನವರಿ ಆರಂಭದಲ್ಲಿ ಆಸ್ಪತ್ರೆಯಲ್ಲಿ 4-5 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಕೋವಿಡ್ ಪಾಸಿಟಿವ್ ಇರಲಿಲ್ಲ. ಕೋವಿಡ್ ಸೋಂಕು 21 ದಿನಗಳವರೆಗೆ ಗಂಟಲಲ್ಲಿರುತ್ತದೆ. ಅನಂತರ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗುವುದಿಲ್ಲ. ಆರಂಭದಲ್ಲಿ ಹೊರಗೆ ಚಿಕಿತ್ಸೆ ಪಡೆದು ನಂತರ ಉಸಿರಾಟದ ತೊಂದರೆಯಾದಾಗ ಅಂಥ ರೋಗಿಗಳು ಬರುತ್ತಾರೆ. ಆಗ ಅವರಿಗೆ ನೆಗೆಟಿವ್ ಬಂದರೂ ಕೋವಿಡ್ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈಗ ಅಂಥ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ.
ಆದ್ದರಿಂದ ನೆಗಡಿ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದರೆ ಜನರು ನಿರ್ಲಕ್ಷ್ಯ ವಹಿಸಬೇಡಿ. ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೇ ಜನರು ಇನ್ನೂ ಕೆಲವು ದಿನಗಳ ಕಾಲ ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವುದು, ಸೋಪಿನಿಂದ ಕೈ ತೊಳೆದು ಕೊಳ್ಳುವುದನ್ನು ಮುಂದುವರೆಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಕೆ.ಎಸ್. ಬನಶಂಕರ ಆರಾಧ್ಯ