ಲಂಡನ್: ಸೌರವ್ಯೂಹದಲ್ಲಿ ಒಂದೇ ಭೂಮಿ ಎನ್ನುವುದು ನಮ್ಮ ಹೆಮ್ಮೆ. ಆದರೆ, ನಮ್ಮ ಆಕಾಶಗಂಗೆ ಗೆಲಾಕ್ಸಿಯಲ್ಲಿಯೇ ಇಂಥ 7 ಭೂಮಿಗಳು ಪತ್ತೆಯಾಗಿವೆ! ಇವೆಲ್ಲವೂ “ಟ್ರಾಪಿಸ್ಟ್- 1′ ಎಂಬ ಸೂರ್ಯನನ್ನು ಸುತ್ತುತ್ತಿವೆ. ಈ ಪೈಕಿ 3 ಗ್ರಹಗಳಲ್ಲಿ ನೀರಿನ ಸೆಲೆಯಿದ್ದು, ಜೀವಿಗಳು ನೆಲೆಸಿರಬಹುದೆಂಬ ಊಹೆ ಈಗ ನಾಸಾ ವಿಜ್ಞಾನಿಗಳದ್ದು.
“ಟ್ರಾಪಿಸ್ಟ್-1′ ನಕ್ಷತ್ರ ಭೂಮಿಯಿಂದ 39 ಜ್ಯೋತಿರ್ವರ್ಷ ದೂರದಲ್ಲಿದ್ದು, ಗಾತ್ರದಲ್ಲಿ ಗುರು ಗ್ರಹಕ್ಕಿಂತ ದೊಡ್ಡದು. ಬಣ್ಣದಲ್ಲಿ ಕಡು ಕೆಂಪು. ಆದರೆ, ನಮ್ಮ ಸೂರ್ಯನಷ್ಟು ಈ ನಕ್ಷತ್ರ ಕೆಂಡಾಮಂಡಲ ವಾಗಿಲ್ಲ. ತುಸು ತಣ್ಣಗಿದೆ. “ಟ್ರಾಪಿಸ್ಟ್-1′ ಕೂಡ ಅಲ್ಟ್ರಾವೈಲೆಟ್ ಕಿರಣ ಗಳ ಉತ್ಪಾದಕ ಉಂಡೆ ಎನ್ನುವುದು ಬಾಹ್ಯಾಕಾಶ ವಿಜ್ಞಾನಿಗಳ ವಾದ.
ತಾಪಮಾನ ಕಡಿಮೆ: ಇಲ್ಲಿ ಜೀವಿಗಳು ನೆಲೆಸಿವೆ ಎಂಬ ಊಹೆ ಹುಟ್ಟಲು ಎರಡು ಕಾರಣ. “ಟ್ರಾಪಿಸ್ಟ್-1’ನ ಏಳೂ ಗ್ರಹಗಳ ತಾಪಮಾನ 0 ಡಿಗ್ರಿ ಸೆಲ್ಸಿಯಸ್‌ನಿಂದ 100 ಡಿಗ್ರಿ ಸೆ. ವರೆಗೆ ಎಂಬುದು ಒಂದು ಅಂಶ. ಸಮುದ್ರದ ರೀತಿಯೇ ಇಲ್ಲೂ ನೀರು ಇದೆ ಎನ್ನುವುದು ಮತ್ತೂಂದು ಅಂಶ. “ಇವೆಲ್ಲವೂ ಮೇಲ್ನೋಟದ ಊಹೆ. ಗ್ರಹದ ವಾತಾವರಣವನ್ನು ಉಪಗ್ರಹಗಳು ಅಧ್ಯಯನಿಸಿದ ಮೇಲೆಯೇ ಈ ಬಗ್ಗೆ ದೃಢವಾಗಿ ಹೇಳಬಹುದು’ ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿ ಮೈಕೆಲ್ ಗಿಲೋನ್.
ಪತ್ತೆ ಹೇಗಾಯ್ತು?: ಚಿಲಿ ದೇಶದ ಮರುಭೂಮಿಯಲ್ಲಿ ಅಳವಡಿಸ ಲಾಗಿದ್ದ ಟ್ರಾಪಿಸ್ಟ್ ರೊಬೊಟಿಕ್ ಟೆಲಿಸ್ಕೋಪ್ ಕಳೆದ ವರ್ಷವೇ 3 ಉಪಗ್ರಹಗಳನ್ನು ಪತ್ತೆಹಚ್ಚಿತ್ತು. ಈ ಟೆಲಿಸ್ಕೋಪ್‌ನ ಹೆಸರನ್ನೇ ನಕ್ಷತ್ರಕ್ಕೂ ಇಡಲಾಗಿತ್ತು. ಟ್ರಾಪಿಸ್ಟ್ ಸುತ್ತಮುತ್ತಲಿನ ವಾತಾವರಣ ವೀಕ್ಷಿಸಲು ಸ್ಪಿಝರ್ ಸ್ಪೇಸ್ ಟೆಲಿಸ್ಕೋಪ್‌ಗ್ಳನ್ನು ನಾಸಾ ಅನಂತರ ಅಳವಡಿಸಿದೆ. ಇವು 60 ಸೆಂ.ಮೀ.ನ ಟೆಲಿಸ್ಕೋಪ್‌ಗ್ಳಾಗಿದ್ದು, ಗ್ರಹದ ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಗುರುತಿಸಿವೆ. ಸ್ಪಿಝರ್ ಸ್ಪೇಸ್ ಟೆಲಿಸ್ಕೋಪ್‌ಗ್ಳ ಫಲಿತಾಂಶವೇ ಈ ಏಳು ಭೂಮಿಗಳು! ಚಿಲಿ, ಮೊರಾಕ್ಕೋ, ಹವಾಯಿ ಮತ್ತು ದಕ್ಷಿಣ ಅಮೆರಿಕದ ಲಿವರ್‌ಪೂಲ್‌ನ ಮರುಭೂಮಿಯಲ್ಲಿ ಈ ಟೆಲಿಸ್ಕೋಪ್‌ಗ್ಳನ್ನು ಅಳವಡಿಸಲಾಗಿದೆ.
ಇಲ್ಲಿ ವರ್ಷ ಫಟಾಫಟ್!: ಭೂಮಿಗೆ ಸೂರ್ಯನನ್ನು ಸುತ್ತಲು 365 ದಿನಗಳು ಬೇಕು. ಅಂದರೆ, ಒಂದು ವರ್ಷ. “ಟ್ರಾಪಿಸ್ಟ್-1’ನ ಗ್ರಹಗಳು ಈ ಕೆಲಸಕ್ಕೆ ತೆಗೆದುಕೊಳ್ಳುವುದು ಕೇವಲ ಒಂದೂವರೆ ದಿನ! ಕೊನೆಯ ಹಾಗೂ ಏಳನೆಯ ಗ್ರಹಕ್ಕೆ ಗರಿಷ್ಠ ಅಂದರೆ, 20 ದಿನಗಳು ಬೇಕಾಗುತ್ತವೆ. “ಟ್ರಾಪಿಸ್ಟ್-1’ನ್ನು ಸುತ್ತಲು “ಬಿ’ ಗ್ರಹಕ್ಕೆ 1.51, “ಸಿ’ಗೆ 2.42, “ಡಿ’ಗೆ 4.5, “ಇ’ಗೆ 6.10, “ಎಫ್’ಗೆ 9.21, “ಜಿ’ಗೆ 12.35 ಹಾಗೂ “ಎಚ್’ ಗ್ರಹಕ್ಕೆ 20.3 ದಿನಗಳು ಬೇಕಾಗುತ್ತವೆ.