Advertisement

ವ್ಯಸನ ಮುಕ್ತ ಸಮಾಜದ ಕನಸುಕಂಡ ಸೇವಾಲಾಲ್‌ ಮಹಾರಾಜ

03:29 PM Feb 16, 2018 | Team Udayavani |

ಬೀದರ: ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಂತ ಸೇವಾಲಾಲ ಮಹಾರಾಜರ ಬೋಧನೆಗಳನ್ನು ಪ್ರತಿಯೊಬ್ಬರು
ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

Advertisement

ನಗರದ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಗೊಂಡವನಕೊಪ್ಪದಲ್ಲಿ ಜನಿಸಿದ ಸೇವಾಲಾಲ ಮಹಾತ್ಮರು ಬಾಲ್ಯದಿಂದಲೇ ಪವಾಡ ಪುರುಷರಾಗಿದ್ದರು. ವ್ಯಸನ ಮುಕ್ತ ಸಮಾಜ ಕಟ್ಟುವ ಕನಸು ಕಂಡಿದ್ದರು. ಸತ್ಯದ ಮಾರ್ಗ ಅನುಸರಿಸಿ, ದುಷ್ಟ ಕಾರ್ಯ ಮಾಡದಿರಿ, ಶಿಸ್ತಿನ ಜೀವನ ನಡೆಸಿ, ದುಃಖದಲ್ಲಿ ಇರುವವರಿಗೆ ಸಹಕರಿಸಿ ಎನ್ನುವ ಸಂದೇಶಗಳನ್ನು ನೀಡಿದರಲ್ಲದೇ ಸಮಾಜದ ಏಳಿಗೆಗೆ ಮಾರಕವಾಗಿದ್ದ ಮೂಢನಂಬಿಕೆಗಳನ್ನು ತೊಲಗಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.

ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುತ್ತಿದೆ. ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸುವ ದಿಟ್ಟ ಹೆಜ್ಜೆ ಇರಿಸಲಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ರಹೀಮ್‌ ಖಾನ್‌ ಮಾತನಾಡಿ, ಬಂಜಾರಾ ಸಮುದಾಯಕ್ಕೆ ಸೇರಿದವರಿಗೆ ಅಗತ್ಯ ತರಬೇತಿ ನೀಡಿ ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಲು ಅನುಕೂವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 100 ಎಕರೆಯಲ್ಲಿ ಅಂದಾಜು 150 ಕೋಟಿ ರೂ.ಗಳ ಅನುದಾನದಲ್ಲಿ ಪ್ರತ್ಯೇಕ ಪಾರ್ಕ್‌ ನಿರ್ಮಿಸಲಾಗುತ್ತಿದೆ ಎಂದರು.

ಯುವಕರು ಸುಶೀಕ್ಷಿತರಾಗಿ ಅಗತ್ಯ ಕೌಶಲ ತರಬೇತಿ ಪಡೆದು ಉನ್ನತ ಹುದ್ದೆಗಳನ್ನು ಪಡೆಯಲು ಯತ್ನಿಸಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ಬೆಂಗಳೂರಿನ ಕಂಠೀರವ ಸ್ಟುಡಿಯೋ ನಿಯಮಿತದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್‌ ಮಾತನಾಡಿ, ನಮ್ಮಲ್ಲಿನ ಮಹಾತ್ಮರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಹಾಗೂ ಎಲ್ಲರನ್ನು ಒಂದೆಡೆ ಸೇರಿಸಿ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರಿಂದ ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

Advertisement

ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳನ್ನು ವಿದ್ಯಾವಂತರಾಗಿಸಬೇಕು. ತಾವು ಬೆಳವಣಿಗೆಯಾಗುವುದರ ಜತೆಗೆ ಸಮಾಜದ ಏಳ್ಗೆಗೆ ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮೇಲ್ವಿಚಾರಕ ಗೋಪಾಲಸಿಂಗ್‌ ರಾಠೊಡ್‌ ಅವರು, ಸಂತ ಸೇವಾಲಾಲ ಮಹಾರಾಜರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ
ಜೈಶ್ರೀ ರಾಠೊಡ, ತಾಪಂ ಸದಸ್ಯರಾದ ಪ್ರಕಾಶ ಜಾಧವ, ಸಮಾಜದ ಮುಖಂಡರಾದ ಗೋವರ್ಧನ್‌ ರಾಠೊಡ,
ಬಸವರಾಜ ಪವಾರ, ತಹಶೀಲ್ದಾರರಾದ ಕೀರ್ತಿ ಚಾಲಕ್‌ ಇರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ
ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚನ್ನಬಸವ ಹೇಡೆ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next