Advertisement

ಮುಂದಿನ ಹೆಜ್ಜೆ “ಸೇವಾ ಸಿಂಧು’: ಮಥಾಯ್‌

09:49 AM Oct 16, 2018 | |

ಉಡುಪಿ: “ಸಕಾಲ’ ಯೋಜನೆಯಡಿ ನಾಗರಿಕರಿಗೆ ನಿಗದಿತ ಸಮಯದಲ್ಲಿ ಸೇವೆ ಲಭಿಸದೆ ಇದ್ದಲ್ಲಿ ದಂಡ ವಿಧಿಸುವ ಅವಕಾಶವಿದೆ. ಈಗ ದಂಡ ಕೇಳದಿರುವ ಕಾರಣ ಸರಿಯಾಗಿ ಜಾರಿಯಾಗುತ್ತಿಲ್ಲ. ಮುಂದೆ ಸಕಾಲದಲ್ಲಿ ಸೇವೆ ಸಿಗದಿದ್ದರೆ ಉತ್ತರದಾಯಿ ಅಧಿಕಾರಿಗಳಿಂದ ಸ್ವಯಂಪ್ರೇರಿತ ದಂಡ ವಸೂಲಿ ಪ್ರಸ್ತಾವ ಇದೆ ಎಂದು ಸಕಾಲ ಮಿಶನ್‌ ಆಡಳಿತಾಧಿಕಾರಿ ಕೆ. ಮಥಾಯ್‌ ಹೇಳಿದರು.

Advertisement

ಸಕಾಲ ಮಿಶನ್‌ ಹಾಗೂ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೋಮವಾರ ಅಧಿಕಾರಿಗಳಿಗೆ ಏರ್ಪಡಿಸಿದ “ಸಕಾಲ ಜನ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಒಟ್ಟು 897 ಸೇವೆಗಳು ಸಕಾಲ ಯೋಜನೆಯಡಿ ಸಿಗುತ್ತಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ, ಪ್ರಮಾಣಪತ್ರ ರವಾನಿಸುವ “ಸೇವಾ ಸಿಂಧು’ ಯೋಜನೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜಾರಿಯಾಗಿದೆ. ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ., ಉಡುಪಿ ಜಿಲ್ಲೆಯಲ್ಲಿ ಸಕಾಲ ಸೇವೆ ಉತ್ತಮವಾಗಿದೆ. ಆದರೆ ಇಲ್ಲೂ ದೂರುಗಳಿವೆ. ಸಕಾಲ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸುವಾಗಲೇ ದೂರವಾಣಿ ಸಂಖ್ಯೆ ನೀಡಬೇಕು. ತತ್‌ಕ್ಷಣ 15 ಅಂಕಿ ಗಳ ಎಸ್‌ಎಂಎಸ್‌ ಸಂದೇಶ ಬರುತ್ತದೆ. ಈ ಸಂಖ್ಯೆ ಮುಂದೆ ವಿಚಾರಣೆ, ದೂರು ಸಲ್ಲಿಕೆ ಸಂದರ್ಭ ಅಗತ್ಯ ಎಂದರು. ಗ್ರಾ.ಪಂ.ನಲ್ಲಿ 11 ಸೇವೆಗಳಿವೆ. ಮತ್ತೆ ಆರು ಸೇವೆಗಳು ತಂತ್ರಾಂಶದಲ್ಲಿ ಸೇರದ ಕಾರಣ ಲಭ್ಯವಾಗುತ್ತಿಲ್ಲ ಎಂದು ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್‌ ತಿಳಿಸಿದರು. 

ಬಾಂಗ್ಲಾ ದೇಶಕ್ಕೂ “ಸಕಾಲ’
ಸಕಾಲ ಯೋಜನೆಯನ್ನು ಇತರ ರಾಜ್ಯಗಳೂ ಅನುಸರಿಸುತ್ತಿವೆ. ಬಾಂಗ್ಲಾ ದೇಶದ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ತರಬೇತಿ ನೀಡಿದ್ದೇನೆ. ಪ್ರಧಾನ ಮಂತ್ರಿ, ಕಾಮನ್‌ವೆಲ್ತ್‌, ಗೂಗಲ್‌ ಇನ್ನೋವೇಶನ್‌ ಪ್ರಶಸ್ತಿಗಳು ಸಿಕ್ಕಿವೆ ಎಂದು ಮಥಾಯ್‌ ಹೇಳಿದರು. 

ಜಿಲ್ಲಾಧಿಕಾರಿಗೂ ದಂಡ
ಓರ್ವ ಅಧಿಕಾರಿಗೆ ಏಳು ಬಾರಿ ದಂಡ ವಿಧಿಸುವಂತಾದರೆ ಇಲಾಖಾ ತನಿಖೆ ನಡೆಸಬಹುದು. ಯೋಜನೆ
ಬಲಪಡಿಸಲು ಹೆಚ್ಚುವರಿ ಕಾರ್ಯದರ್ಶಿ ರಾಜೀವ್‌ ಚಾವ್ಲಾರನ್ನು ನೇಮಿಸಲಾಗಿದೆ. ಸಕಾಲದಲ್ಲಿ ಸೇವೆ ಸಲ್ಲಿಸದ ಡಿಸಿಗೂ ದಂಡ ವಿಧಿಸಿದ ಉದಾಹರಣೆ ಇದೆ ಎಂದರು.

Advertisement

ಸಕಾಲ ಕೌಂಟರ್‌, ಫ‌ಲಕ ಪ್ರದರ್ಶನ ಕಡ್ಡಾಯ
ವಿವಿಧ ಇಲಾಖೆಗಳಲ್ಲಿ ಸಕಾಲ ಕೌಂಟರ್‌ ಇದ್ದರೂ ಅದರ ಮೂಲಕ ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಸಾರ್ವಜನಿಕರು ಈ ಕೌಂಟರ್‌ ಮೂಲಕವೇ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಪ್ರತಿ ನಿಯೋಜಿತ ಅಧಿಕಾರಿ ಕಚೇರಿಯಲ್ಲಿ  ಸಕಾಲ ದಲ್ಲಿ  ಸಿಗುವ ವಿವಿಧ ಯೋಜನೆಗಳ ಹೆಸರು, ಸೇವೆ ಲಭ್ಯವಾಗುವ ದಿನಗಳು, ನಿಯೋಜಿತ ಅಧಿಕಾರಿ, ಮೇಲ್ಮನವಿ ಸಲ್ಲಿಸಬೇಕಾದ ಅಧಿಕಾರಿಗಳ ಹೆಸರು, ಪದನಾಮದೊಂದಿಗೆ ಫ‌ಲಕಗಳನ್ನು ಕಡ್ಡಾಯವಾಗಿ ಹಾಕಿರಬೇಕು. ರಾಜ್ಯದಲ್ಲಿ  ಸುಮಾರು 20,000 ನಿಯೋಜಿತ ಅಧಿಕಾರಿಗಳಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ತತ್‌ಕ್ಷಣ ಎಫ್ಐಆರ್‌ ದಾಖಲಾಗಬೇಕು. ಸಬ್‌ ರಿಜಿಸ್ಟ್ರಾರ್‌ ಇಲಾಖೆಯಲ್ಲಿ ಋಣಭಾರ ಪತ್ರ (ಇಸಿ) 24 ಗಂಟೆಗಳೊಳಗೆ ನೀಡಬೇಕು, ಲರ್ನಿಂಗ್‌ ಲೈಸನ್ಸ್‌ 3 ದಿನಗಳಿಂದ ಒಂದು ದಿನಕ್ಕೆ ಇಳಿಸುವ ಪ್ರಸ್ತಾವವಿದೆ. ಈ ಸಮಯ ದಲ್ಲಿ ದೊರಕದೆ ಹೋದಲ್ಲಿ ಸಂಬಂಧಿತ ಅಧಿಕಾರಿಗಳು ದಂಡ ಪಾವತಿಸಬೇಕು. 
 ಕೆ. ಮಥಾಯ್‌, ಸಕಾಲ ಮಿಶನ್‌ ಆಡಳಿತಾಧಿಕಾರಿ

ಉಡುಪಿ ಜಿಲ್ಲೆ :1ನೇ ಸ್ಥಾನಕ್ಕೇರಲು ಕರೆ
ಕಳೆದ ಐದಾರು ತಿಂಗಳಿಂದ ಉಡುಪಿ ಜಿಲ್ಲೆ ಅರ್ಜಿ ಇತ್ಯರ್ಥದಲ್ಲಿ ಎರಡನೇ ಸ್ಥಾನದಲ್ಲಿದೆ. ಅರ್ಜಿ ಸ್ವೀಕಾರದಲ್ಲಿ 19ನೇ ಸ್ಥಾನದಲ್ಲಿದೆ. ನಾವು ಅರ್ಜಿ ಇತ್ಯರ್ಥದಲ್ಲಿ ಪ್ರಥಮ ಸ್ಥಾನಕ್ಕೇರಲು ಪ್ರಯತ್ನಿಸಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next