Advertisement

ಎಂಡೋ ಸಂತ್ರಸ್ತರ ಬದುಕಲ್ಲಿ ಚೈತನ್ಯ ಮೂಡಿಸಿದ ಸೇವಾ ಭಾರತಿ

04:42 PM Nov 15, 2017 | |

ಆಲಂಕಾರು: ಭವಿಷ್ಯವನ್ನೇ ಕಳೆದುಕೊಂಡು ನರಳುತ್ತಿದ್ದ ಎಂಡೋ ಸಂತ್ರಸ್ತರ ಬದುಕಿನ ನೂತನ ಶಕೆ ಪ್ರಾರಂಭವಾಗಿದೆ. ಮಂಗಳೂರು ಸೇವಾ ಭಾರತಿ ಕೊಯಿಲ ಮತ್ತು ಕೊಕ್ಕಡ ಎಂಡೋ ಪಾಲನಾ ಕೇಂದ್ರಗಳ ಉಸ್ತುವಾರಿ ಪಡೆದ ಬಳಿಕ ಎಂಡೋ ಪೀಡಿತ ಮಕ್ಕಳ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗಳಾಗಿ ನೂತನ ಚೈತನ್ಯ ಮೂಡಿಸಿದೆ. ಕೇಂದ್ರಕ್ಕೆ ದಾಖಲಾದ 32 ಮಂದಿಯಲ್ಲಿ
ಗಮನಾರ್ಹ ಬದಲಾವಣೆಗಳಾಗಿದ್ದು, ಹೆತ್ತವರಲ್ಲಿ ಹೊಸ ಭರವಸೆ ಮೂಡಿಸಿದೆ.

Advertisement

ಬದುಕಿನ ಕತ್ತಲೆಯಲ್ಲಿರುವ ಮಕ್ಕಳನ್ನು ಬೆಳಕಿನೆಡೆಗೆ ತರುವ ಮಹತ್ತರ ಉದ್ದೇಶದಿಂದ ಕೊಯಿಲ, ಕೊಕ್ಕಡ ಎಂಡೋ ಪಾಲನಾ ಕೇಂದ್ರಗಳಲ್ಲಿ ವಿಶೇಷ ಶಿಕ್ಷಕಿಯರನ್ನು ನೇಮಿಸಲಾಗಿದೆ. ಅಂಧ ಮಕ್ಕಳಿಗಾಗಿ ವಿಶೇಷ ತರಗತಿಯನ್ನು ನಡೆಸಲಾಗುತ್ತಿದೆ. ಸ್ಪೆಷಲ್‌ಫಿಸಿಯೋಥೆರಪಿಸ್ಟನ್ನು ಇಲ್ಲಿ ನೇಮಿಸಿಕೊಳ್ಳಲಾಗಿದ್ದು, 3 ಹಂತದ ವಿಶೇಷ ತರಗತಿ ದಿನಂಪ್ರತಿ ನಡೆಸಲಾಗುತ್ತದೆ.

ಇದರ ಪರಿಣಾಮ ಒಂದು ವರ್ಷದ ಹಿಂದೆ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ ಮಕ್ಕಳು ಇಂದು ಸ್ವತಂತ್ರವಾಗಿ ಶೌಚಾಲಯಕ್ಕೆ ಹೋಗಿ ಬರುತ್ತಿದ್ದಾರೆ. ಚಮಚದಲ್ಲಿ ಊಟ ಮಾಡುತ್ತಿದ್ದವರು ಇಂದು ತಾವೇ ತಟ್ಟೆಗೆ ಕೈಹಾಕಿ ತುತ್ತು ತೆಗೆದುಕೊಂಡು ಊಟ ಮಾಡುತ್ತಾರೆ. ತಮ್ಮ ಶರೀರದ ಅಂಗಾಂಗಗಳನ್ನು ಗುರುತಿಸಿಕೊಳ್ಳಲೂ ಅಸಮರ್ಥರಾಗಿದ್ದ ಮಕ್ಕಳು ಈಗ ಅವಯವಗಳನ್ನು ಮುಟ್ಟಿ ಹೆಸರು ಹೇಳುವಷ್ಟು ಪ್ರಗತಿ ಸಾಧಿಸಿದ್ದಾರೆ. ಒಬ್ಬ ವಿದ್ಯಾರ್ಥಿ ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಬರೆಯಲು ಪೂರ್ವಸಿದ್ಧತೆ ಮಾಡಿಕೊಂಡು, ಇತರ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆಯುವುದು ಸಾಧನೆ ಎನಿಸಿದೆ.

ಆರೋಗ್ಯದ ಮೇಲೆ ಸಂಪೂರ್ಣ ನಿಗಾ
ಸಂತ್ರಸ್ತರ ಜತೆಗೆ ಹೆತ್ತವರು ಮತ್ತು ಕೇಂದ್ರ ಸಿಬಂದಿಯ ಆರೋಗ್ಯದ ಮೇಲೆಯೂ ಸಂಪೂರ್ಣ ನಿಗಾ ಇರಿಸಲಾಗಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಮಂಗಳೂರಿನ ಕೆಎಂಸಿ ಮತ್ತು ವೆನ್ಲಾಕ್‌ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್‌, ಮಕ್ಕಳ ತಜ್ಞರು, ವಿಶೇಷ ವೈದ್ಯರ ತಂಡ ಆಗಮಿಸಿ ಆರೋಗ್ಯ ಶಿಬಿರ ನಡೆಸಿಕೊಡುತ್ತಿದ್ದಾರೆ. ಸಂತ್ರಸ್ತರಿಗೆ, ಪೋಷಕರಿಗೆ, ಸಿಬಂದಿಗೆ ಕೇಂದ್ರದ ವತಿಯಿಂದ ಸಂಪೂರ್ಣ ಉಚಿತ ಔಷಧ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಗತ್ಯವಾದರೆ ಇವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೇಂದ್ರದಲ್ಲಿ ಒಬ್ಬರು ಫಿಸಿಯೋಥೆರಪಿ ವೈದ್ಯರು ಹಾಗೂ ಸಹಾಯಕಿ ಸಂತ್ರಸ್ತರ ದೈನಂದಿನ ಆರೋಗ್ಯ ತಪಾಸಣೆಯನ್ನು ಮಾಡುತ್ತಿದ್ದಾರೆ.

ವಿಶೇಷ ಆಹಾರ ತಿನಿಸುಗಳು
ಮಕ್ಕಳಿಗೆ ಇಲ್ಲಿ ವಾರದ ಎಲ್ಲ ದಿನಗಳಲ್ಲೂ ವಿಶೇಷ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ ಪಲಾವ್‌, ಬ್ರೆಡ್‌ ಆಮ್ಲೆಟ್‌, ಇಡ್ಲಿ ಸಾಂಬಾರ್‌, ಗೋಧಿ ದೋಸೆ, ಚಪಾತಿ, ಉದ್ದಿನ ದೋಸೆಯ ಜತೆಗೆ ಪ್ರತಿ ನಿತ್ಯ ಬೆಳಗ್ಗೆ ಪ್ರೊಟೀನ್‌ಯುಕ್ತ ಹಾಲನ್ನು ನೀಡ ಲಾಗುತ್ತದೆ. ಮಧ್ಯಾಹ್ನ ಅನ್ನ – ಸಾಂಬಾರ್‌, ಪಲ್ಯ, ಮಜ್ಜಿಗೆ, ಮೊಟ್ಟೆ ನೀಡಲಾಗುತ್ತದೆ.

Advertisement

ಸಂಜೆ ವಾರದ 2 ದಿನ ಬಾದಾಮಿ ಹಾಲು, 2 ದಿನ ಕೊತ್ತಂಬರಿ ಕಷಾಯ, 2 ದಿನ ರಾಗಿ ಮಣ್ಣಿ ಮತ್ತು ಪ್ರತಿದಿನ ಬಾಳೆಹಣ್ಣು ನೀಡಲಾಗುತ್ತದೆ. ಜತೆಗ ಪ್ರತಿ ದಿನ ಸಂಜೆ ಮಕ್ಕಳಿಗೆ ಆಟೋಟಗಳನ್ನು ಕಲಿಸಿಕೊಡಲಾಗುತ್ತಿದೆ. ಕ್ಯಾರಂ. ಲೂಡಾ, ವಾಲಿಬಾಲ್‌ ಆಟದ ಜತೆಗೆ ಓಟವನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ.

ಇಂದು ಸತಂತ್ರ್ಯ 
ಒಂದು ವರ್ಷದ ಹಿಂದೆ ಪಾಲನಾ ಕೇಂದ್ರಕ್ಕೆ ಬರುತ್ತಿದ್ದ ಅಂಗವಿಕಲ ಆಶಿಕ್‌ (8 ವರ್ಷ) ಎಂಬ ಬಾಲಕನನ್ನು
ನಿಯಂತ್ರಿಸಲಾಗದೆ ಆಗಿನ ಸಿಬಂದಿ ಆತನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಕಟ್ಟಿ ಹಾಕುತ್ತಿದ್ದರು. ಈತ ಇತರ ವಿದ್ಯಾರ್ಥಿಗಳು, ಸಿಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದ. ಆದರೆ ಸೇವಾ ಭಾರತಿಯ ನುರಿತ ತಜ್ಞರ ಪರಿಶ್ರಮದ ಪರಿಣಾಮ ಅಂದು ಕಟ್ಟಿ ಹಾಕುತ್ತಿದ್ದ ಆಶಿಕ್‌ ಇಂದು ಸ್ವತಂತ್ರವಾಗಿ ಇತರ ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ಬೆರೆಯುತ್ತಿರುವುದು ವಿಶೇಷವಾಗಿದೆ.

ನಮಗೂ ಬದುಕಿದೆ ಎಂಬುದನ್ನು ತೋರಿಸಿದೆ
ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಬರೆಯಲು ಪೂರ್ವಸಿದ್ಧತೆ ಮಾಡಿ ಕೊಳ್ಳುತ್ತಿದ್ದೇನೆ. ಪಾಲನಾ ಕೇಂದ್ರದಲ್ಲಿ ಅಭ್ಯಾಸಗಳು ನಡೆಯುತ್ತಿವೆ. ಮನೆ ಯಲ್ಲಿಯೂ ಪುನರಾವರ್ತಿಸುತ್ತಿದ್ದೇನೆ. 450ಕ್ಕಿಂತ ಅಧಿಕ ಅಂಕಗಳನ್ನು ಪಡೆಯುವುದು ನನ್ನ ಗುರಿಯಾಗಿದೆ. ಇಷ್ಟು ವರ್ಷ ನಾನು ಪರೀಕ್ಷೆ ಬರೆಯುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಸೇವಾಭಾರತಿಯ ಶಿಕ್ಷಕ ವೃಂದದವರ ಕಾಳಜಿಯಿಂದ ಪರೀಕ್ಷೆಗೆ ಬರೆಯಲು ತಯಾರಾಗುತ್ತಿದ್ದೇನೆ. ನನಗೀಗ ಸಿಗುತ್ತಿರುವ ಪ್ರೋತ್ಸಾಹ ನೋಡಿ ನಮಗೂ ಒಂದು ಬದುಕಿದೆ ಎಂಬುದು ಸಾಬೀತಾಗುತ್ತಿದೆ. ಅವರಿಗೆ ನಾನು ಚಿರಋಣಿ.
-ಅಭಿಷೇಕ್‌, ಎಂಡೋ ಸಂತ್ರಸ್ತ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next