Advertisement
ಒಮ್ಮೆ ಸೆಟ್ ಟಾಪ್ ಬಾಕ್ಸ್ ಖರೀದಿಸಿದರೆ ಅದನ್ನು ಯಾವುದೇ ಕೇಬಲ್ ಆಪರೇಟರ್ ಅಥವಾ ಡಿಟಿಎಚ್ ಆಪರೇಟರ್ ಜೊತೆ ಬೇಕಾದರೂ ಬಳಸಿಕೊಳ್ಳಬಹುದಾದ ಸೌಲಭ್ಯವನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಸದ್ಯ ಜನರಿಗೆ ಟಿವಿ ಚಾನೆಲ್‌ಗಳ ಆಯ್ಕೆಯಲ್ಲಿ ಇನ್ನಷ್ಟು ಸ್ವಾತಂತ್ರ್ಯ ನೀಡಲು ನೂತನ ನೀತಿ ಜಾರಿಗೊಳಿಸಿರುವ ಟ್ರಾಯ್, ಸದ್ಯ ದೇಶದಲ್ಲಿ 16 ಕೋಟಿ ಕೇಬಲ್ ಹಾಗೂ ಡಿಟಿಎಚ್ ಬಳಕೆದಾರರಿದ್ದಾರೆ. ಈ ಎಲ್ಲ ಎಸ್‌ಟಿಬಿಗಳನ್ನೂ ಕೇವಲ ಒಂದು ಸೇವೆ ಪೂರೈಕೆದಾರರೊಂದಿಗೆ ಮಾತ್ರ ಬಳಸಬೇಕಿದೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮನೆ ಬದಲಿಸಿದರೆ, ಅಲ್ಲಿ ಆ ಕೇಬಲ್ ಚಾನೆಲ್‌ನ ಸೇವೆ ಇಲ್ಲದೇ, ಬೇರೆ ಕೇಬಲ್ ಸಂಪರ್ಕ ಪಡೆಯಬೇಕಾದರೆ ಈಗಾಗಲೇ ಖರೀದಿ ಮಾಡಿದ ಸೆಟ್ ಟಾಪ್ ಬಾಕ್ಸ್ ಬದಲಿಗೆ ಇನ್ನೊಂದು ಸೆಟ್ ಟಾಪ್ ಬಾಕ್ಸ್ ಪಡೆಯಬೇಕಿದೆ.
ಸಾಫ್ಟ್ವೇರ್ ಪರಿಹಾರ: ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಜೊತೆಗೆ ಸಹಭಾಗಿತ್ವ ಸಾಧಿಸಿದ್ದೇವೆ. ಅಲ್ಲದೆ ಇತರ ಸಂಸ್ಥೆಗಳೂ ಇದಕ್ಕೆ ಕೈಜೋಡಿಸಿವೆ. ಈ ಯೋಜನೆ ನಿರೀಕ್ಷಿಸಿದ್ದಕ್ಕಿಂತ ವಿಳಂಬವಾಗಿದ್ದಕ್ಕೆ ಈ ಸವಾಲೇ ಕಾರಣ ಎಂದು ಶರ್ಮಾ ಹೇಳಿದ್ದಾರೆ. ಒಂದೊಂದು ಸೆಟ್ ಟಾಪ್ ಬಾಕ್ಸ್ ನಲ್ಲೂ ಒಂದೊಂದು ಸಾಫ್ಟ್ವೇರ್ ಇದೆ. ಅವೆಲ್ಲವುಗಳಿಗೂ ಒಂದೇ ಸಾಫ್ಟ್ವೇರ್ ಅಳವಡಿಸುವ ಕುರಿತು ನಾವು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸದ್ಯ ಪ್ರಯೋಗ ನಡೆಯುತ್ತಿದೆ ಎದಿದ್ದಾರೆ.