ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ದೇವಸ್ಥಾನದಲ್ಲಿ ನಡೆದ ಸ್ವತ್ಛತೆ ಕಾರ್ಯ ಮತ್ತು ಸಿದ್ಧತೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ. 20ರಂದು ಸೀಗಿ ಹುಣ್ಣಿಮೆಯಂದು ನಡೆಯಲಿರುವ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಕೋವಿಡ್ ನಿಯಮಗಳನ್ವಯ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ಬಾರಿ ದರ್ಶನ ಭಾಗ್ಯ ಮತ್ತು ಪ್ರಸಾದ ವ್ಯವಸ್ಥೆಗೆ ಅವಕಾಶ ಇರಲಿಲ್ಲ. ಆದರೆ ಈ ಬಾರಿ ಮೆರವಣಿಗೆ ಒಂದು ಬಿಟ್ಟು ಎಲ್ಲವೂ ಯಥಾಸ್ಥಿತಿಯಲ್ಲಿ ನಡೆಯಲಿವೆ ಎಂದರು.
ದೇವಸ್ಥಾನಕ್ಕೆ ಹೋಗುವ ರಸ್ತೆ ಎರಡು ಬದಿ ಬೆಳೆದ ಗಿಡಗಂಟಿಗಳನ್ನು ತೆರವು ಮಾಡಲಾಗಿದೆ. ದೇವಸ್ಥಾನ ಒಳಗಡೆ ಹಾಗೂ ಹೊರಗಡೆ ಸಂಪೂರ್ಣ ಸ್ವತ್ಛತೆ ಮಾಡಲಾಗಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿವ ನೀರು, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಮಹಿಳೆಯರಿಗಾಗಿ ಶೌಚಾಲಯ ಹಾಗೂ ತಾತ್ಕಾಲಿಕ ಸ್ನಾನದ ಗೃಹಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕಾಗಿ ಸಾಲಾಗಿ ಹೋಗಲು ಕಟ್ಟಿಗೆಗಳು ಕಟ್ಟಲಾಗಿದೆ. ನಂದಿ ಬಾವಿಗೆ ಸ್ನಾನ ಮಾಡಲು ಹೋಗುವ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ರಸ್ತೆ ಎರಡು ಬದಿ ಹಾಗೂ ಬಾವಿ ಸುತ್ತ ಬೆಳೆದ ಗಿಡಗಂಟಿ ತೆರವು ಮಾಡಲಾಗಿದೆ ಎಂದರು.
ಪುರಸಭೆ ಸಹಕಾರದಿಂದ ವಿದ್ಯುತ್ ವ್ಯವಸ್ಥೆ ಹಾಗೂ ಸ್ವತ್ಛತೆ ಕಾರ್ಯ ಮಾಡಲಾಗಿದೆ. ಈಗಾಗಲೇ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪಲ್ಲಕ್ಕಿ ಉತ್ಸವ ದಿನದಂದು ಯಾವುದೇ ತೊಂದರೆ ಮತ್ತು ಗದ್ದಲ ಆಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.
ಕಂದಾಯ ನಿರೀಕ್ಷಕ ಮಧುಸೂದನ ಘಾಳೆ, ಪುರಸಭೆ ಸಿಬ್ಬಂದಿ ಸಾಬಣ್ಣ ಕಾಶಿ, ದೇವಸ್ಥಾನದ ಸಿಬ್ಬಂದಿ ಮಾರ್ತಾಂಡ ಮುಡಬೂಳ, ವಿಶ್ವನಾಥ ಇವಣಿ, ಶಂಕರ ಕಣ್ಣಿ ಮೊದಲಾದವರಿದ್ದರು.