Advertisement

ಕರಾವಳಿಯ ತಾಜಾ ಮೀನು ರಫ್ತಿಗೆ ಹಿನ್ನಡೆ !

11:54 PM Nov 08, 2020 | mahesh |

ಮಂಗಳೂರು: ನಮ್ಮ ಕರಾವಳಿ ಜಿಲ್ಲೆಗಳ ಸಮುದ್ರ ಮೀನಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ. ಆದರೆ ವಿಮಾನಯಾನ ಸಂಸ್ಥೆಗಳ ನಿರಾಸಕ್ತಿಯಿಂದ ಇಲ್ಲಿನ ತಾಜಾ ಮೀನು ರಫ್ತಿಗೆ ದೊಡ್ಡ ಹಿನ್ನಡೆಯಾಗಿದೆ.

Advertisement

ತಾಜಾ ಮೀನನ್ನು ಹಿಡಿದ ದಿನ ಅಥವಾ ಸಂಸ್ಕರಿಸಿ ಒಂದೆರಡು ದಿನಗಳೊಳಗೆ ವಿಮಾನದ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಬಹುದು. ಆದರೆ ಮಂಗಳೂರು ವಿಮಾನ ನಿಲ್ದಾಣದಿಂದ ತಾಜಾ ಮೀನು ಸಾಗಾಟಕ್ಕೆ ಅವಕಾಶವಿಲ್ಲ; ಲಾಕ್‌ಡೌನ್‌ ಪೂರ್ವದಲ್ಲಿ ಬೆಂಗಳೂರು, ಗೋವಾ ಅಥವಾ ಕೇರಳದ ಕೋಯಿ ಕ್ಕೋಡ್‌, ತಿರುವನಂತಪುರವರೆಗೆ ರಸ್ತೆ ಮಾರ್ಗವಾಗಿ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಕಳುಹಿಸಲಾಗುತ್ತಿತ್ತು. ಇದು ಹಣ ಮತ್ತು ಸಮಯ- ಎರಡೂ ದೃಷ್ಟಿಯಿಂದ ದುಬಾರಿ. ಹೀಗಾಗಿ ತಾಜಾ ಮೀನುರಫ್ತು ಸಮಸ್ಯೆ ಆಗಿದೆ.

ಏರ್‌ ಇಂಡಿಯಾ ನಿರಾಸಕ್ತಿ!
3 ವರ್ಷಗಳ ಹಿಂದೆ ಮಂಗಳೂರಿನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ತಾಜಾ ಮೀನು ರಫ್ತಾಗುತ್ತಿತ್ತು. ಆದರೆ ಅಸಮರ್ಪಕ ಪ್ಯಾಕೇಜಿಂಗ್‌ನಿಂದ ಸಾಗಾಟಕ್ಕೆ ತಾಂತ್ರಿಕ ಸಮಸ್ಯೆ ಆಗುತ್ತಿದೆ ಎಂಬ ಕಾರಣ ನೀಡಿ ಸ್ಥಗಿತಗೊಳಿಸಿತ್ತು. ಹೀಗಾಗಿ ಬೇರೆ ವಿಮಾನ ನಿಲ್ದಾಣಗಳ ಮೂಲಕ ರವಾನಿಸಬೇಕಾಯಿತು. ಲಾಕ್‌ಡೌನ್‌ ಬಳಿಕ ಅದೂ ಸ್ಥಗಿತಗೊಂಡಿದೆ.

ಇಂಡಿಗೋ ಸಹಮತ
ಮಂಗಳೂರಿನಿಂದ ದುಬಾೖಗೆ ಇಂಡಿಗೋ ವಿಮಾನ ಸೇವೆ ಆರಂಭಿಸುವ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದ್ದು, ಅದರ ಮೂಲಕ ತಾಜಾ ಮೀನನ್ನು ಕೊಂಡೊಯ್ಯಲು ಅವಕಾಶ ನೀಡುವ ಮಾತುಕತೆ ನಡೆಯುತ್ತಿದೆ.

ಕಾರ್ಗೊ ಆದ್ಯತೆ
ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿ ಸಂಸ್ಥೆಗೆ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಕಾರ್ಗೊ ವಿಮಾನಗಳಿಗೆ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆಯಿದೆ. ಇದಾದರೆ ಕರಾವಳಿಯಿಂದ ವಿವಿಧ ಉತ್ಪನ್ನಗಳ ರಫ್ತಿಗೆ ಅವಕಾಶ ಸಿಗಬಹುದು.

Advertisement

69 ಸಾವಿರ ಮೆ. ಟನ್‌ ಮೀನು ರಫ್ತು
ದ.ಕ., ಉಡುಪಿ ಜಿಲ್ಲೆಯಿಂದ ವಾರ್ಷಿಕ 69 ಸಾವಿರ ಮೆ.ಟ. ಮೀನು ರಫ್ತಾಗುತ್ತದೆ. ಶೀತಲೀಕೃತ ವ್ಯವಸ್ಥೆಯ ಮೀನನ್ನು ಎನ್‌ಎಂಪಿಟಿ ಬಂದರಿನಿಂದ ಹಡಗಿನಲ್ಲಿ ಕಳುಹಿಸಲಾಗುತ್ತದೆ. ಶೀತಲೀಕೃತ ಮೀನನ್ನು 9 ತಿಂಗಳವರೆಗೂ ಕಾಪಿಡ ಬಹುದು. ತಾಜಾ ಮೀನನ್ನು 3-4 ದಿನ ಮಾತ್ರ ಕಾದಿರಿಸಬಹುದು. ಆದ್ದರಿಂದ ವಿಮಾನ ಮೂಲಕವಷ್ಟೇ ರಫ್ತು ಮಾಡಬಹುದಾಗಿದೆ. ಸದ್ಯ ವಿದೇಶಕ್ಕೆ ವಿಮಾನ ಇಲ್ಲ; ಇದಕ್ಕೆ ಮುನ್ನ ಮಂಗಳೂರು ಬಿಟ್ಟು ಇತರ ನಗರಗಳಿಂದ ವಿಮಾನದ ಮೂಲಕ ರಫ್ತು ಮಾಡಲಾಗುತ್ತಿತ್ತು.

ತಾಜಾ ಮೀನು ರಫ್ತಿಗೆ ಮಂಗಳೂರು ವಿಮಾನ ನಿಲ್ದಾಣ ಮೂಲಕ ಏಕೆ ಅವಕಾಶ ಸಿಗುತ್ತಿಲ್ಲ ಎಂಬ ಬಗ್ಗೆ ಸಂಬಂಧಪಟ್ಟವರ ಜತೆಗೆ ಮಾತುಕತೆ ನಡೆಸಲಾಗುವುದು. ವಿದೇಶಕ್ಕೆ ವಿಮಾನ ಆರಂಭವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

ವಿಮಾನದಲ್ಲಿ ರಫ್ತಿಗೆ ಅವಕಾಶ ನೀಡುವಂತೆ ಏರ್‌ ಇಂಡಿಯಾ ಸಿಇಒಗೆ ಮನವಿ ಮಾಡಲಾಗಿದೆ. ಇದು ಸಾಧ್ಯವಾದರೆ ಇಲ್ಲಿನ ಮೀನುಗಾರಿಕೆ ಚಟುವಟಿಕೆ ಯಲ್ಲಿ ಮತ್ತಷ್ಟು ಚೇತರಿಕೆ ಸಾಧ್ಯ.
– ಐಸಾಕ್‌ ವಾಜ್‌, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next