ನವದೆಹಲಿ:ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಹೊರಿಸಿದ್ದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶದ ಬಗ್ಗೆ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಗುರುವಾರ(ಏ.8) ನಿರಾಕರಿಸಿದೆ. ಇದರಿಂದ ಅನಿಲ್ ದೇಶ್ ಮುಖ್ ಕಾನೂನು ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:ನಿರ್ಮಾಪಕರ ಪತ್ನಿ-ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!
ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ರದ್ದುಪಡಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಅನಿಲ್ ದೇಶ್ ಮುಖ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ ನೀಡಿದ್ದ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅನಿಲ್ ದೇಶ್ ಮುಖ್ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಎಸ್.ಕೆ.ಕೌಲ್ ಮತ್ತು ಜಸ್ಟೀಸ್ ಹೇಮಂತ್ ಗುಪ್ತಾ ತಿಳಿಸಿದ್ದಾರೆ.
ಕಮಿಷನರ್ ಮತ್ತು ಗೃಹ ಸಚಿವರು ಶಾಮೀಲಾಗಿರುವ ಈ ಪ್ರಕರಣ ತುಂಬಾ ಗಂಭೀರವಾದದ್ದು. ಹಾಗಾದರೆ ಇದೊಂದು ಸಿಬಿಐಗೆ ಒಪ್ಪಿಸುವ ಪ್ರಕರಣವಲ್ಲವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಆರಂಭಿಕ ಹಂತದಲ್ಲಿ ಅನಿಲ್ ದೇಶ್ ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಹೈಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ನೀಡಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದರೆ ಇದರರ್ಥ ಗೃಹ ಸಚಿವರಿಗೆ ಕಚೇರಿ ಅಧಿಕಾರದ ಮೇಲೆ ವ್ಯಾಮೋಹ ಇತ್ತು ಎಂಬುದರ ಸೂಚಕವಾಗಿದೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.