ಹೊಸದಿಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಒದಗಿರುವ ಅತೀ ದೊಡ್ಡ ಹಿನ್ನಡೆಯ ವಿದ್ಯಮಾನದಲ್ಲಿ ಕೇಂದ್ರ ಸರಕಾರ ದಿಲ್ಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸಚಿವರ 9 ಸಲಹೆಗಾರರನ್ನು ವಜಾ ಮಾಡಿದೆ. ಈ ಹುದ್ದೆಗಳಿಗೆ ಪೂರ್ವ ಮಂಜೂರಾತಿ ಇಲ್ಲವೆಂದು ಕೇಂದ್ರ ಗೃಹ ಸಚಿವಾಲಯ ಹೇಳಿರುವುದನ್ನು ಅನುಸರಿಸಿ ದಿಲ್ಲಿ ರಾಜ್ಯಪಾಲರು ಈ ಕ್ರಮಕೈಗೊಂಡಿದ್ದಾರೆ.
ವಜಾಗೊಂಡಿರುವ ಸಲಹೆಗಾರರ ಪೈಕಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಇಬ್ಬರು ಮಾಧ್ಯಮ ಸಲಹೆಗಾರರೂ ಸೇರಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.
ಕೇಂದ್ರ ಗೃಹ ಸಚಿವಾಲಯದ ಶಿಫಾರಸಿನ ನೆಲೆಯಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ದಿಲ್ಲಿ ಸರಕಾರ ಕೇಂದ್ರದ ಪೂರ್ವಾನುಮತಿ ಇಲ್ಲದೇ ನೇಮಿಸಿಕೊಂಡಿದ್ದ 9 ಸಲಹೆಗಾರರನ್ನು ವಜಾ ಮಾಡಿದರು.
ವಜಾಗೊಂಡಿರುವ 9 ಸಲಹೆಗಾರರಲ್ಲಿ ಪ್ರಮುಖರೆಂದರೆ ಅಮರ್‌ದೀಪ್ ತಿವಾರಿ (ಕಾನೂನು ಸಚಿವರ ಸಲಹೆಗಾರ), ಅರುಣೋದಯ ಪ್ರಕಾಶ್ (ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ), ಆತಿಶಿ ಮಾರ್ಲೇನ (ಉಪ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ್ತಿ), ರಾಘವ ಛಡ್ಡಾ (ಹಣಕಾಸು ಸಚಿವರ ಸಲಹೆಗಾರ),
ವಜಾಗೊಂಡಿರುವ ಈ ಸಲಹೆಗಾರರನ್ನು ದಿಲ್ಲಿ ಸರಕಾರ ಕಳೆದ ಮೂರು ವರ್ಷಗಳಿಂದ ನೇಮಿಸಿಕೊಂಡಿತ್ತು.
ಕೇಂದ್ರ ಸರಕಾರದ ಈ ಕ್ರಮದಿಂದ ಈಗಿನ್ನು ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಾಕ್ಸಮರವನ್ನು ಆರಂಭಿಸುವುದು ಖಚಿತವಿದೆ.