ರಾಯಚೂರು: ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಗೂ ಗುಣಮಟ್ಟದ ಹತ್ತಿ ಬೆಳೆಯುತ್ತಿದ್ದು, ಜವಳಿ ಪಾರ್ಕ್ ಸ್ಥಾಪಿಸಲು ಜಿಲ್ಲೆಗಿಂತ ಸೂಕ್ತ ಸ್ಥಳ ಮತ್ತೂಂದಿಲ್ಲ ಎಂದು ಸರ್ಕಾರವು ಜವಳಿ ಪಾರ್ಕ್ ಸ್ಥಾಪಿಸಬೇಕು ಎಂದು ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ತಿಳಿಸಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಕ್ಕ ಪಕ್ಕದ ರಾಜ್ಯಗಳ ರೈತರು ಕೂಡ ಹತ್ತಿ ಮಾರಲು ರಾಯಚೂರು ಮಾರುಕಟ್ಟೆಗೆ ಬರುತ್ತಾರೆ. ಜಿಲ್ಲೆಯಲ್ಲಿ ಹತ್ತಿ ಮೌಲ್ಯವರ್ಧನೆ ಮಾಡುವುದರಿಂದ ಈ ಉದ್ಯಮಕ್ಕೆ ಇಲ್ಲಿ ಉತ್ತಮ ವೇದಿಕೆ ಸಿಗಲಿದೆ. ಜವಳಿ ಪಾರ್ಕ್ ಮಂಜೂರಿಗಾಗಿ ಸಾಕಷ್ಟು ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಸರಿಯಲ್ಲ. ಜವಳಿ ಪಾರ್ಕ್ ಸ್ಥಾಪನೆಯಾದರೆ 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸಿಗಲಿವೆ ಎಂದರು.
ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಪೂರಕ ವಾತಾವರಣ ಜಿಲ್ಲೆಯಲ್ಲಿದೆ. ಈ ಬಗ್ಗೆ ಸರ್ಕಾರವು ಅಂಕಿ ಅಂಶಗಳನ್ನು ಸಂಗ್ರಹಿಸಿ ಈ ಭಾಗದ ರೈತರು, ಹತ್ತಿ ಕಾರ್ಖಾನೆಗಳ ಮಾಲೀಕರು, ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಮಾಡಬೇಕು. ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಸಲ್ಲಿಸುವ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀರೆಡ್ಡಿ ಮಾತನಾಡಿ, ಇತ್ತೀಚೆಗೆ ರಾಯಚೂರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಿನಿ ಜವಳಿ ಪಾರ್ಕ್‌ವೊಂದನ್ನು ರಾಯಚೂರಿನಲ್ಲಿ ಸ್ಥಾಪಿಸುವುದಾಗಿ ಹೇಳಿರುವುದು ಸಂತಸದ ವಿಚಾರವಾಗಿದೆ ಎಂದರು.
ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಮಾತನಾಡಿದರು. ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀರೆಡ್ಡಿ, ಕೇಂದ್ರ ಸರ್ಕಾರ ದೇಶದಲ್ಲಿ ಏಳು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಮುಂದಾಗಿದ್ದು, ಅದರಲ್ಲಿ ರಾಯಚೂರಲ್ಲಿ ಕೂಡ ಒಂದು ಸ್ಥಾಪಿಸಬೇಕಿದೆ ಎಂದರು. ಇದೇ ವೇಳೆ ಒಕ್ಕೂಟದ ಸದಸ್ಯರು ವಿವಿಧ ಬೇಡಿಕೆಗಳ ಮನವಿಯನ್ನು ಎ.ಪಾಪಾರೆಡ್ಡಿ ಅವರಿಗೆ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲು, ಉಪಾಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ರಾಯಚೂರು ವಾಣಿಜ್ಯೋದ್ಯಮಿಗಳ ಸಂಘದ ಉಪಾಧ್ಯಕ್ಷ ಶ್ರೀನಿಕ್ ರಾಜ್ ಮೋಥಾ ಸೇರಿ ಇತರರಿದ್ದರು.