Advertisement

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ

03:48 PM Jul 03, 2018 | Team Udayavani |

fದಾವಣಗೆರೆ: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ ಮಾತನಾಡಿ, ರಾಜ್ಯದ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಹಗಲಿರುಳು ಬಿಸಿಲು, ಮಳೆ, ಚಳಿ ಎನ್ನದೆ ಕೆಲಸ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ. ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ಹಲವಾರು ವರ್ಷದಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಆದರೆ, ಈ ಕ್ಷಣಕ್ಕೂ ವೈಜ್ಞಾನಿಕ ಬೆಲೆ ಎಂಬುದು ರೈತರಿಗೆ ದೊರೆಯುತ್ತಿಲ್ಲ. ರೈತರು ಬೆಳೆಯುವ ಪ್ರತಿ ಬೆಳೆಯ ಖರ್ಚು-ವೆಚ್ಚದ ಮೇಲೆ ಶೇ. 20ರಷ್ಟು ಲಾಭದ ಪ್ರಮಾಣ ನೀಡುವ ಮೂಲಕ ಅನ್ನದಾತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಜಾಗತೀಕರಣ ನೀತಿಯಿಂದಾಗಿ ರೈತರಿಗೆ ನೀಡಲಾಗುತ್ತಿದ್ದ ಎಲ್ಲ ರೀತಿಯ ಸಹಾಯಧನ ನಿಲ್ಲಿಸಲಾಗುತ್ತಿದೆ. ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕದ ಬೆಲೆ ಹೆಚ್ಚಾಗುತ್ತಿರುವ ಪರಿಣಾಮ ಕೃಷಿ ಚಟುವಟಿಕೆ ವೆಚ್ಚವೂ ಹೆಚ್ಚಾಗುತ್ತಿದೆ. ಆದರೆ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ಸಾಲಗಾರರಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರ ಬರಬೇಕಾದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಆಗಬೇಕು ಎಂದು ಆಗ್ರಹಿಸಿದರು.

ಸರ್ಕಾರಗಳು ಸಾಲ ಮನ್ನಾ ಮಾಡಿದಾಕ್ಷಣ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತೆ ಸಾಲ ಮಾಡಬೇಕಾಗುತ್ತದೆ. ಮಾಡಿದ ಸಾಲ ತೀರಿಸಲು ಸಾಲ, ಆ ಸಾಲ ತೀರಿಸಲು ಮತ್ತೂಂದೆಡೆ ಸಾಲ ಮಾಡಬೇಕಾಗುತ್ತದೆ. ಸಾಲದ ಸುಳಿಯಲ್ಲೇ ರೈತ ಸಿಲುಕಿ ನರಳುತ್ತಾನೆ. ಆದರೆ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ರೈತರಿಗೆ ಸಾಲ ಬೇಕಾಗಿಯೇ ಇಲ್ಲ. ಜೋಳ, ರಾಗಿ, ಭತ್ತಕ್ಕೆ ಕ್ವಿಂಟಾಲ್‌ಗೆ 4 ಸಾವಿರ, ಹತ್ತಿ, ಶೇಂಗಾ, ಸೂರ್ಯಕಾಂತಿಗೆ 10 ಸಾವಿರ, ಮೆಕ್ಕೆಜೋಳಕ್ಕೆ 3 ಸಾವಿರ, ಈರುಳ್ಳಿಗೆ 5 ಸಾವಿರದಷ್ಟು ವೈಜ್ಞಾನಿಕ ಬೆಲೆ ಸಿಗುವಂತಾಗಲು ಉಭಯ ಸರ್ಕಾರಗಳು ಚರ್ಚಿಸಿ, ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. 

ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು. ಅರಸನಾಳು ಸಿದ್ದಪ್ಪ, ಆಲೂರು ಪರುಶುರಾಮ, ಹೂವಿನಮಡು ನಾಗರಾಜ್‌, ಅಣ್ಣಪ್ಪ, ಕೆ.ಆರ್‌. ರಾಜಪ್ಪ, ಕೃಷ್ಣ, ಪರಮೇಶ, ಯರವನಾಗತಿಹಳ್ಳಿ ರುದ್ರಪ್ಪ, ಗುಮ್ಮನೂರು ಕೃಷ್ಣ, ಗೌಡಗೊಂಡನಹಳ್ಳಿ ಸತೀಶ್‌, ಎಂ. ಮಹಾಂತೇಶ್‌, ರುದ್ರೇಶ್‌, ಯಲ್ಲೋದಹಳ್ಳಿ ರವಿಕುಮಾರ್‌, ಚಿರಂಜೀವಿ, ಮಲ್ಲಿಗೆರೆ ಪ್ರಕಾಶ್‌, ಹಲವಾಗಲು ಕರಿಯಪ್ಪ, ಓಬಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next