Advertisement

ಹಾಸಿಗೆ-ಮೂಲ ಸೌಲಭ್ಯಕ್ಕೆ ಶೇ.50 ಕೋವಿಡ್ ಚಿಕಿತ್ಸೆಗೆ ಮೀಸಲಿಡಿ

10:04 AM Jun 26, 2020 | mahesh |

ಧಾರವಾಡ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆ ಹಾಗೂ ಮೂಲ ಸೌಲಭ್ಯದಲ್ಲಿ ಶೇ.50 ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕೆಂದು ಡಿಸಿ ದೀಪಾ ಚೋಳನ್‌ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿತಗೊಂಡ ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.

Advertisement

ರಾಜ್ಯ ಸರಕಾರವು ಜಿಲ್ಲೆಯ 22 ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಆಯ್ಕೆ ಮಾಡಿ ಚಿಕಿತ್ಸೆಗೆ ದರ ನಿಗದಿಗೊಳಿಸಿದೆ. ಆದರೆ ಗುರುವಾರ ಪರಿಷ್ಕರಣೆ ಮಾಡಿ ಆಯ್ಕೆಯಾಗಿರುವ ಆಸ್ಪತ್ರೆಗಳಲ್ಲಿ ಕಣ್ಣು ಹಾಗೂ ದಂತ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಜಿಲ್ಲಾಡಳಿತವು ಕೊರೊನಾ ಚಿಕಿತ್ಸೆಗೆ ಜಿಲ್ಲೆಯ ಸರಕಾರಿ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರಗಳಿಗೆ ಆದ್ಯತೆ ನೀಡಿ ಅಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಮತ್ತು ಅಗತ್ಯವೆನಿಸಿದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಿದೆ. ಇದಕ್ಕೆ ತಗಲುವ ವೆಚ್ಚವನ್ನು ಸರಕಾರವು ಸುವರ್ಣ
ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ನೇರವಾಗಿ ಆಸ್ಪತ್ರೆಗೆ ಬಿಡುಗಡೆ ಮಾಡಲಿದೆ ಎಂದರು.

ಕೋವಿಡ್‌-19 ರೋಗಿಗಳಿಗೆ ಒಂದು ದಿನಕ್ಕೆ ಪ್ಯಾಕೇಜ್‌ ಆಗಿ ಸರಕಾರ ದರ ನಿಗದಿಗೊಳಿಸಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸು ಮಾಡುವ ಕೋವಿಡ್‌-19 ರೋಗಿಗಳ ವೆಚ್ಚವಾಗಿ ಜನರಲ್‌ ವಾರ್ಡ್‌- 5200 ರೂ., ಹೆಚ್‌.ಡಿ.ಯು  7000 ರೂ., ಐಸೊಲೇಷನ್‌ ಐಸಿಯು ವೆಂಟಿಲೇಟರ ರಹಿತ 8500 ರೂ.ಮತ್ತು ವೆಂಟಿಲೇಟರ ಸಹಿತ 10.000 ರೂ.ನಿಗದಿಗೊಳಿಸಿದೆ. ನಗದು ಪಾವತಿ ಮಾಡುವ ಪಿ.ಎಚ್‌.ಪಿ ಗಳಿಂದ ನೇರವಾಗಿ ಪ್ರವೇಶ ಪಡೆದ ಖಾಸಗಿ ಕೋವಿಡ್‌-19 ರೋಗಿಗಳಿಗೆ ಒಂದು ದಿನದ ಪ್ಯಾಕೇಜ್‌ ಆಗಿ ಜನರಲ್‌ ವಾರ್ಡ್‌ 10,000, ಹಚ್‌.ಡಿ.ಯು 12,000 ರೂ., ಐಸೊಲೇಷನ್‌ ಐಸಿಯು ವೆಂಟಿಲೇಟರ್‌
ರಹಿತ 15,000 ರೂ. ಮತ್ತು ವೆಂಟಿಲೇಟರ್‌ ಸಹಿತ 25,000 ರೂ.ಗಳಾಗಿ ಸರಕಾರ ದರ ನಿಗದಿಗೊಳಿಸಿದೆ ಎಂದರು.

ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರ, ಸಿಬ್ಬಂದಿ ಆರೋಗ್ಯ ಸುರಕ್ಷತೆಗಾಗಿ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದಲ್ಲಿ ಸರಕಾರಕ್ಕೆ ಈ ಕುರಿತು ಪತ್ರ ಬರೆಯುವುದಾಗಿ ಡಿಸಿ ಸಭೆಯಲ್ಲಿ ತಿಳಿಸಿದರು.

ಎಸ್‌ಡಿಎಂ, ಎಚ್‌.ಆರ್‌.ಸಿ ಆಸ್ಪತ್ರೆ, ವಿಠ್ಠಲ ಚಿಕ್ಕ ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯರು ಮಾತನಾಡಿ, ಸರಕಾರದ ಮಾರ್ಗಸೂಚಿಗಳಂತೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೋವಿಡ್‌-19 ರೋಗಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ವಿಮೆ ಅಳವಡಿಸಲು ಸರಕಾರಕ್ಕೆ ಮನವಿ ಮಾಡಿದರು. ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ|ಶಶಿ ಪಾಟೀಲ್‌ ಸ್ವಾಗತಿಸಿದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವಿಭಾಗಿಯ ಸಂಯೋಜಕ ಡಾ|ವಿ.ಡಿ ಡಾಂಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ರೋಗಿಗೆ ಚಿಕಿತ್ಸೆ ನೀಡುವ ಮತ್ತು ವೆಚ್ಚ ಭರಿಸುವ ಕುರಿತು ಸರಕಾರದ ಆದೇಶ, ಮಾರ್ಗಸೂಚಿಗಳ ಕುರಿತು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಯಶವಂತ ಮದೀನಕರ ಸಭೆ ನಿರ್ವಹಿಸಿ,
ವಂದಿಸಿದರು.

Advertisement

ತಪಾಸಣೆ ಹೆಚ್ಚಿಸಲು ಸೂಚನೆ: ಇದಕ್ಕೂ ಮುನ್ನ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಡಿಸಿ ದೀಪಾ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್‌ ತಪಾಸಣೆ ಹೆಚ್ಚಿಸಬೇಕು.  ಜಿಲ್ಲೆಯಾದ್ಯಂತ 57 ಸಕ್ರಿಯ ಕಂಟೇನ್ಮೆಂಟ್‌ ಪ್ರದೇಶಗಳಿವೆ. ಅಂತಹ ಪ್ರದೇಶಗಳ ಎಲ್ಲ ನಿವಾಸಿಗಳ ನಿರಂತರ ತಪಾಸಣೆಗೊಳಪಡಿಸಬೇಕು. ಎಲ್ಲ ಆಶಾ ಕಾರ್ಯಕರ್ತರಿಗೆ ಪಲ್ಸ್‌, ಆಕ್ಸಿಮೀಟರ್‌ ಪೂರೈಸಬೇಕು. ಸ್ಯಾನಿಟೈಸರ್‌,ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ನಿವಾಸಿಗಳ ಸಾಮಾನ್ಯ ಆರೋಗ್ಯ ಮಟ್ಟವನ್ನು ದಾಖಲಿಸಿ ಅಗತ್ಯ ಇರುವವರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಸಕ್ರಿಯ ಪ್ರಕರಣಗಳ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು, ಬೀದಿ ಬದಿ ವ್ಯಾಪಾರಸ್ಥರ, ಶಾಪಿಂಗ್‌ ಕಾಂಪ್ಲೆಕ್ಸ್‌, ಮಾಲ್‌ ಗಳಲ್ಲಿ ಕೆಲಸ ಮಾಡುವ ಜನರಲ್ಲಿ ರ್‍ಯಾಂಡ್‌ಮ್‌ ಆಗಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಕೋವಿಡ್‌ ತಪಾಸಣೆ ಮಾಡಬೇಕೆಂದು ಸೂಚನೆ ನೀಡಿದರು.

ಕೋವಿಡ್‌-19 ಚಿಕಿತ್ಸೆ ನೀಡಲಿರುವ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಗೊಂಡಿರುವ ಜಿಲ್ಲೆಯ ಆಸ್ಪತ್ರೆಗಳು ಇಂತಿವೆ. ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ (ನವನಗರ), ಎಚ್‌ಸಿಜಿ ಎನ್‌ಎಂಆರ್‌ ಕ್ಯೂರಿ ಸೆಂಟರ್‌ ಓಂಕೊಲಾಜಿ (ದೇಶಪಾಂಡೆ ನಗರ,ಹುಬ್ಬಳ್ಳಿ), ಎಸ್‌ಡಿಎಮ್‌ ನಾರಾಯಣ ಹೃದಯಾಲಯ (ಸತ್ತೂರ), ಶಕುಂತಲಾ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಹೊಸೂರ), ಫೋರ್ಟಿಸ್‌ ಸುಚಿರಾಯು ಆಸ್ಪತ್ರೆ (ಗೋಕುಲ ರಸ್ತೆ), ಅಶೋಕ ಆಸ್ಪತ್ರೆ (ವಿದ್ಯಾನಗರ), ಜಯಪ್ರಿಯ ಆಸ್ಪತ್ರೆ (ಬೈಲಪ್ಪನವರ ನಗರ), ವಿವೇಕಾನಂದ ಜನರಲ್‌ ಆಸ್ಪತ್ರೆ (ದೇಶಪಾಂಡೆ ನಗರ), ಶಿವಕೃಪಾ ಆಸ್ಪತ್ರೆ ಹಾಗೂ ತೀವ್ರ ನಿಗಾ ಘಟಕ (ಲ್ಯಾಮಿಂಗ್ಟನ್‌ ರಸ್ತೆ ಹುಬ್ಬಳ್ಳಿ), ಶ್ರೀಬಾಲಾಜಿ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂರೋ ಸೈನ್ಸಸ್‌ (ವಿದ್ಯಾನಗರ), ವಿಠ್ಠಲ ಮಕ್ಕಳ ಆಸ್ಪತ್ರೆ (ಜುಬ್ಲಿ ವೃತ್ತ), ಹುಬ್ಬಳ್ಳಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ (ವಿದ್ಯಾನಗರ), ಸಂಜಿವಿನ ಸ್ಪೆಷಾಲಿಟಿ ಆಸ್ಪತ್ರೆ (ವಿದ್ಯಾನಗರ), ನಾಲ್ವಾಡ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ವಿಕಾಸನಗರ ಹೊಸೂರ), ಎಸ್‌ ಡಿಎಮ್‌ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಕಾಲೇಜು (ಸತ್ತೂರ), ತತ್ವದರ್ಶ ಆಸ್ಪತ್ರೆ (ಹುಬ್ಬಳ್ಳಿ), ವಾತ್ಸಲ್ಯ ಆಸ್ಪತ್ರೆ (ಗೋಕುಲ ರಸ್ತೆ ಹುಬ್ಬಳ್ಳಿ), ಸೆಕ್ಯೂರ್‌ ಆಸ್ಪತ್ರೆ (ಗೋಕುಲ ರಸ್ತೆ ಹುಬ್ಬಳ್ಳಿ), ವಿಹಾನ ಹೃದಯ ಕೇರ್‌ ಪ್ರೈವೇಟ್‌ ಲಿಮಿಟೆಡ್‌ (ದೇಶಪಾಂಡೆನಗರ ಹುಬ್ಬಳ್ಳಿ).

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸು ಮಾಡುವ ಕೋವಿಡ್‌ -19ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ರೋಗಿಗಳ ಕಡೆಯಿಂದ ಯಾವುದೇ ರೀತಿಯ ಶುಲ್ಕ, ವೆಚ್ಚ ವಸೂಲು ಮಾಡುವಂತಿಲ್ಲ ಮತ್ತು ಖಾಸಗಿ ಕೋವಿಡ್‌-19 ರೋಗಿಗಳಿಂದ ಸರಕಾರ ನಿಗದಿಪಡಿಸಿದ ದರಗಳಿಗಿಂತ ಹೆಚ್ಚು ಹಣ ವಸೂಲು ಮಾಡುವಂತಿಲ್ಲ.
ದೀಪಾ ಚೋಳನ್‌, ಡಿಸಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next