ಮಂಗಳೂರು: ವಿಧಾನಸಭಾ ಕಲಾಪ ಪ್ರಸಾರಕ್ಕೆ ಖಾಸಗಿ ಮಾಧ್ಯಮಗಳಿಗೆ ರಾಜ್ಯ ಸರಕಾರ ನಿರ್ಬಂಧ ವಿಧಿಸಿರುವ ಕ್ರಮ ಸರಿಯಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಧ್ಯಮ ಸಂವಿಧಾನದ ನಾಲ್ಕನೇ ಆಧಾರ ಸ್ತಂಭವಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಧಾನಸಭಾ ಕಲಾಪ ಪ್ರಸಾರಕ್ಕೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಜನಪ್ರತಿ
ನಿಧಿಗಳ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವುದು ಸೂಕ್ತವಲ್ಲ ಎಂದರು.
ಐಟಿ ದಾಳಿಯ ವಿಚಾರದ ಪ್ರಶ್ನೆಗೆ ಉತ್ತರಿಸಿ, ಅಕ್ರಮ ಸಂಪತ್ತು ಸಂಗ್ರಹ, ಸಂಪತ್ತು ದುರ್ಬಳಕೆ ಮಾಡಿದವರ ಮೇಲೆ ಐಟಿ ದಾಳಿ ಸಾಮಾನ್ಯ. ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಪ್ರತಿ ಬಾರಿ ಐಟಿ ದಾಳಿಯಾದಾಗಲೂ ವಿಪಕ್ಷೀಯರು ಆಡಳಿತವನ್ನು ದೂರುವುದು ಸಹಜ ಎಂದರು.
ಕೇಂದ್ರ ಸರಕಾರ ಮತ್ತು ಪ್ರಧಾನಿ ವಿರುದ್ಧ ಮಾತನಾಡಿದರೆ ರಾಜ ದ್ರೋಹದ ಪ್ರಕರಣ ದಾಖಲಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇಂತಹ ಬೆಳವಣಿಗೆ ನಡೆಯಬಾರದಿತ್ತು. ಹಾಗೆಂದು ದೇಶ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ. ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜದ್ರೋಹ ಕಾಯ್ದೆ ಅನಿವಾರ್ಯ. ಆದರೆ ಇದು ದೇಶದ ಹಿತಕ್ಕೆ ಬಳಕೆಯಾಗಬೇಕು ಎಂದರು.
ಆಡಳಿತಾತ್ಮಕ ಧೋರಣೆ ವಿರೋಧಿಸಿ ಐಎಎಸ್ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಯಾಂಗವು ಸಂವಿಧಾನದ ಎರಡನೇ ಆಧಾರಸ್ತಂಭ. ಹಾಗಿರುವಾಗ ಭಾವನಾತ್ಮಕ ವಿಚಾರಗಳಿಗೆ ಆಸ್ಪದವಿಲ್ಲ. ಐಎಎಸ್ ರಾಜೀ ನಾಮೆಯನ್ನು ನಾನು ಒಪ್ಪುವುದಿಲ್ಲ ಎಂದರು.