Advertisement

Session ಅಹೋರಾತ್ರಿ ಧರಣಿಗೆ ಅಧಿವೇಶನ ಬಲಿ;  ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಕೆಂಡಾಮಂಡಲ

01:07 AM Jul 26, 2024 | Team Udayavani |

ಬೆಂಗಳೂರು: ಮುಡಾ ಹಗರಣದ ಚರ್ಚೆಗೆ ಬಿಗಿಪಟ್ಟು ಹಿಡಿದು ಬುಧವಾರ ಆರಂಭಿಸಿದ್ದ ಅಹೋರಾತ್ರಿ ಧರಣಿಯನ್ನು ವಿಪಕ್ಷ ಸದಸ್ಯರು ಗುರುವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಮುಂದುವರಿಸಿದ್ದರಿಂದ ಕೋಲಾಹಲ ಉಂಟಾಗಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ನಿಗದಿಗಿಂತ ಒಂದು ದಿನ ಮುಂಚಿತವಾಗಿ ಅಧಿವೇಶನಕ್ಕೆ ತೆರೆ ಬಿದ್ದಂತಾಯಿತು.

Advertisement

ಗ‌ದ್ದಲದ ನಡುವೆ ಉಭಯ ಸದನ
ಗಳಲ್ಲಿ ಹಲವು ಮಸೂದೆಗಳಿಗೆ ಅನುಮೋದನೆ ನೀಡಿ, ಒಂದು ದೇಶ ಒಂದು ಚುನಾವಣೆ, ಕ್ಷೇತ್ರ ಪುನರ್ವಿಂಗಡಣೆ, ನೀಟ್‌ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು. ಶುಕ್ರವಾರದವರೆಗೆ ನಡೆಯಬೇಕಿದ್ದ ಅಧಿವೇಶನವು ಗುರುವಾರಕ್ಕೇ ಮೊಟಕಾಯಿತು. ಜು. 15, ಸೋಮವಾರ ಆರಂಭವಾಗಿದ್ದ ಅಧಿವೇಶನದಲ್ಲಿ ಮೊದಲೆರಡು ದಿನ ಯಾವುದೇ ಗಲಾಟೆ ಗದ್ದಲ ಇಲ್ಲದೆ ಸಂತಾಪ ಸೂಚನೆ, ಪ್ರಶ್ನೋತ್ತರ ವೇಳೆ ಮತ್ತಿತರ ಕಲಾಪಗಳು ನಡೆದಿದ್ದವು.

ಅನಂತರ ವಾಲ್ಮೀಕಿ ನಿಗಮದ ಹಗರಣದ ವಿಷಯ ಪ್ರಸ್ತಾವಿಸಿದ ವಿಪಕ್ಷಗಳು ಸಿಬಿಐ ತನಿಖೆಗೆ ವಹಿಸಬೇಕೆಂದು ಪಟ್ಟು ಹಿಡಿದು ಸರಕಾರದ ವಿರುದ್ಧ ತೋಳು ತಟ್ಟಿ ನಿಂತವು. ಎಸ್‌ಐಟಿ ತನಿಖೆ ವರದಿ ಬರಲಿ, ಅನಂತರ ನೋಡೋಣ ಎಂಬ ಸಿಎಂ ಸಿದ್ದರಾಮಯ್ಯ ಅವರ ಉತ್ತರ ಬಹಿಷ್ಕರಿಸಿ ಸಭಾತ್ಯಾಗ ನಡೆಯಿತು.

ಇದಕ್ಕೆ ಪ್ರತಿಯಾಗಿ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಸಮಾಜ ಕಲ್ಯಾಣಾಧಿಕಾರಿ ಕಲ್ಲೇಶ್‌ ಎಂಬಾತನನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಬೆದರಿಸಿ, ಸಿಎಂ ಹೆಸರು ಹೇಳುವಂತೆ ಒತ್ತಡ ಹಾಕಿದ್ದಾರೆ ಎಂಬ ಎಫ್ಐಆರ್‌ ಇರಿಸಿಕೊಂಡು ಆಡಳಿತ ಪಕ್ಷದವರು ಇ.ಡಿ. ಹಾಗೂ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದರು.

ನಿಲುವಳಿ ಸೂಚನೆ ತಿರಸ್ಕಾರ
ಎರಡು ದಿನಗಳಿಂದ ಮುಡಾ ವಿಷಯ ಪ್ರಸ್ತಾವಿಸಲು ಅವಕಾಶ ಕೋರುತ್ತಿದ್ದ ವಿಪಕ್ಷಗಳ ನಿಲುವಳಿ ಸೂಚನೆಯು ಉಭಯ ಸದನಗಳಲ್ಲೂ ತಿರಸ್ಕೃತಗೊಂಡಿತ್ತು. ಹೀಗಾಗಿ ಅಹೋರಾತ್ರಿ ಧರಣಿ ಆರಂಭಿಸಿದ ಬಿಜೆಪಿ-ಜೆಡಿಎಸ್‌ ಸದಸ್ಯರು ಬುಧವಾರ ರಾತ್ರಿ ಕಲಾಪ ಮುಂದೂಡಿಕೆಯಾದ ಅನಂತರವೂ ಸರಕಾರದ ವಿರುದ್ಧ ಪ್ರತಿಭಟನೆ, ವಿಧಾನಸೌಧ ಕಾರಿಡಾರ್‌ ಸುತ್ತಲೂ ಭಜನೆ, ಕುಣಿತ ನಡೆಸಿದ್ದರು. ಗುರುವಾರ ಬೆಳಗ್ಗೆ ಪುನರಾರಂಭಗೊಂಡ ಸದನದಲ್ಲಿ ತೀರ್ಪು ಪುನರ್‌ಪರಿಶೀಲಿಸುವಂತೆ ಬೇಡಿಕೆ ಇಟ್ಟರು.

Advertisement

ಬಗ್ಗದ ಸ್ಪೀಕರ್‌, ಸಭಾಪತಿ
ಯಾವುದಕ್ಕೂ ಬಗ್ಗದ ಸ್ಪೀಕರ್‌ ಹಾಗೂ ಸಭಾಪತಿ ಕಲಾಪ ನಡೆಸಲು ಮುಂದಾದರು. ಕಲಾಪದ ಆರಂಭ ದಿಂದಲೂ ಬಾವಿಯಲ್ಲೇ ಇದ್ದ ವಿಪಕ್ಷ ಸದಸ್ಯರು ಧರಣಿ ತೀವ್ರಗೊಳಿಸಿದರು. ಎರಡು-ಮೂರು ಬಾರಿ ಕಲಾಪ ಮುಂದೂಡಿ ಸಂಧಾನ ನಡೆಸಿದರೂ ಆಡಳಿತ-ವಿಪಕ್ಷಗಳ ಪಟ್ಟು ಮಾತ್ರ ಸಡಿಲಗೊಳ್ಳಲಿಲ್ಲ. ಕೊನೆಗೆ ವಿಪಕ್ಷಗಳ ಗದ್ದಲದ ನಡುವೆ ಮಸೂದೆಗಳಿಗೆ ಅಂಗೀಕಾರ ನೀಡಿ, ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಂಡು, ವಿಧಾನ ಪರಿಷತ್‌ನ ಅಂಗೀಕಾರದ ನಿರೀಕ್ಷೆಯಲ್ಲಿ ಭೋಜನ ವಿರಾಮಕ್ಕೆ ಮುಂದೂಡಲಾಗಿತ್ತು. ಭೋಜನ ವಿರಾಮದ ಬಳಿಕವೂ ವಿಪಕ್ಷಗಳ ಧರಣಿ ಮುಂದುವರಿದದ್ದರಿಂದ ಅನಿದಿಷ್ಟಾವಧಿಗೆ ಮುಂದೂಡಲಾಯಿತು.

ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್‌ ದೂರು
ಮುಡಾ ಹಗರಣ ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ವಿಧಾನಮಂಡಲದಲ್ಲಿ ಆಹೋರಾತ್ರಿ ಧರಣಿ ನಡೆಸಿದ ಬಿಜೆಪಿ-ಜೆಡಿಎಸ್‌ ನಾಯಕರು ಗುರುವಾರ ಅಧಿವೇಶನದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು. ಸ್ವತಃ ಹಗರಣದಲ್ಲಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸೂಚಿಸಬೇಕು, ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

8 ದಿನ; 37 ತಾಸು
ನಡೆದ ವಿಧಾನಸಭೆ ಕಲಾಪ
16ನೇ ವಿಧಾನಸಭೆಯ 4ನೇ ಅಧಿವೇಶನವು 8 ದಿನ ನಡೆದಿದ್ದು, 37 ತಾಸು ಕಲಾಪ ನಡೆದಿದೆ. ಧನವಿನಿಯೋಗ ಮಸೂದೆ, ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ, ಖಾಸಗಿ ಆಸ್ಪತ್ರೆ, ವೈದ್ಯೋಪಚಾರ ಸಿಬಂದಿ ಮೇಲಿನ ದೌರ್ಜನ್ಯ ತಡೆ ಸೇರಿ 13 ಮಸೂದೆಗಳನ್ನು ಮಂಡಿಸಿ 12ಕ್ಕೆ ಅನುಮೋದನೆ ಪಡೆಯಲಾಯಿತು. ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next