Advertisement

Central Vista: ಗಣೇಶ ಹಬ್ಬದಂದು ಹೊಸ ಭವನದಲ್ಲಿ ಅಧಿವೇಶನ

02:38 AM Sep 07, 2023 | Team Udayavani |

ಹೊಸದಿಲ್ಲಿ: ವಿಘ್ನ ವಿನಾಯಕನ ಚೌತಿ ದಿನವೇ ಹೊಸ ಸಂಸತ್‌ ಭವನದಲ್ಲಿ ಕಲಾಪ ಆರಂಭವಾಗಲಿದೆ. ಇದೇ ತಿಂಗಳ 18ರಿಂದ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಸೆ. 19ರಂದು ವಿನಾಯಕ ಚತುರ್ಥಿ. ಅಂದೇ ಉಭಯ ಸದನಗಳ ಕಲಾಪವು ನೂತನ ಸಂಸತ್‌ ಭವನಕ್ಕೆ ಸ್ಥಳಾಂತರವಾಗಲಿದೆ.

Advertisement

ಅದೇ ಉದ್ದೇಶ ಕೇಂದ್ರ ಸರಕಾರ ಕ್ಕಿದೆ. ಸೆ.18ರಂದು ಮೊದಲ ದಿನದ ಕಾರ್ಯ ಕಲಾಪಗಳು ಹಳೆಯ ಸಂಸತ್‌ ಕಟ್ಟಡದಲ್ಲೇ ನಡೆಯಲಿದೆ. ಹೊಸ ಆರಂಭಕ್ಕೆ ಪವಿತ್ರವಾದ ದಿನ ಎಂದೇ ಪರಿಗಣಿಸಲಾದ ಚೌತಿಯ ದಿನ ಹೊಸ ಭವನದಲ್ಲಿ ಕಲಾಪ ನಡೆಯಲಿದೆ ಎನ್ನುತ್ತವೆ ಮೂಲಗಳು.

ವಿಶೇಷ ಅಧಿವೇಶನವು 18ರಿಂದ 22ರ  ವರೆಗೆ ನಡೆಯಲಿದೆ. ಕಳೆದ ಗುರು ವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿಯವರು ಈ ಕುರಿತು ಘೋಷಿ ಸಿದ್ದರು. ಆದರೆ ಈ ಅಧಿವೇಶನ ಕರೆಯಲು ಕಾರಣವೇನು, ಕಾರ್ಯ ಸೂಚಿ ಯೇನು ಎಂಬುದನ್ನು ಸರಕಾರ ಇನ್ನೂ ಬಹಿರಂಗ ಪಡಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಪ್ರತಿಷ್ಠಿತ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ನೂತನ ಸಂಸತ್‌ ಭವನವನ್ನು ಮೇ 28ರಂದು ಮೋದಿಯವರೇ ಲೋಕಾರ್ಪಣೆಗೊಳಿಸಿದ್ದರು. 971 ಕೋಟಿ ರೂ. ವೆಚ್ಚದಲ್ಲಿ ಭವನ ತಲೆ ಎತ್ತಿದ್ದು, ಲೋಕಸಭೆಯಲ್ಲಿ 888 ಸದಸ್ಯರು, ರಾಜ್ಯಸಭೆಯಲ್ಲಿ 300 ಸದಸ್ಯರು ಆಸೀನರಾಗುವಷ್ಟು ಆಸನ ಸಾಮರ್ಥ್ಯವನ್ನು ಇದು ಹೊಂದಿದೆ.

ಪ್ರಸಕ್ತ ವರ್ಷದ ಸಂಸತ್‌ನ ಮುಂಗಾರು ಅಧಿ ವೇಶನದ ದ್ವಿತೀಯಾರ್ಧವು ನೂತನ ಕಟ್ಟಡದಲ್ಲೇ ನಡೆಯಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಇಡೀ ಅಧಿವೇಶನ ಹಳೆಯ ಸಂಸತ್‌ ಭವನದಲ್ಲೇ ನಡೆದಿತ್ತು. ಈಗ ವಿಶೇಷ ಅಧಿವೇಶನಕ್ಕೆ ನೂತನ ಭವನದ ಭಾಗ್ಯ ಒದಗಿಬಂದಿದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next