ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಪ್ರಾರಂಭಿಸಿದೆ. ಟೋಲ್ ಸಂಗ್ರಹಣೆಯ ಅಧಿಕ ವೆಚ್ಚ ಭರಿಸುವ ಸಲುವಾಗಿ ಟೋಲ್ ಮುಖಾಂತರ ಸಾಗುವ ಪ್ರತಿ ಪ್ರಯಾಣಿಕರಿಂದ 3 ರೂ. ಟೋಲ್ ಸೆಸ್ ಪಡೆಯಲು ನಿರ್ಧರಿಸಲಾಗಿದೆ.
ಖಾಸಗಿ ಬಸ್‌ಗಳಲ್ಲಿ ಫೆ. 17ರಿಂದ ಪ್ರಯಾಣ ದರವು 3 ರೂ. ಹೆಚ್ಚಳವಾಗಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಾಸ್ತಾನದಲ್ಲಿ ಪ್ರತಿ ಟ್ರಿಪ್‌ಗೆ 195, ಹೆಜಮಾಡಿಯಲ್ಲಿ 160 ರೂ. ಟೋಲ್ ಶುಲ್ಕ ಕಟ್ಟಬೇಕಿದೆ. ಹೀಗಾಗಿ ಟೋಲ್ ಆಗಿ ಮುಂದಕ್ಕೆ ಪ್ರಯಾಣಿಸುವ ಪ್ರತಿ ಪ್ರಯಾಧಿಣಿಕರಿಗೆ 3 ರೂ. ಹೆಚ್ಚುವರಿ ದರ ವಿಧಿಸುವುದು ನಮಗೂ ಅನಿವಾರ್ಯ. ಟೋಲ್ ಶುಲ್ಕವನ್ನು ಪ್ರಯಾಣಿಕರ ಮೇಲೆ ಹಾಕಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅದರಂತೆಯೇ ದರ ಏರಿಸಲಾಗಿದೆ. ಪ್ರಸ್ತುತ ಪ್ರತಿ ಪ್ರಯಾಣಿಕರಿಗೆ 5 ರೂ. ಏರಿಸುವ ಅನಿವಾರ್ಯತೆ ಇದ್ದರೂ 3 ರೂ. ಮಾತ್ರ ಏರಿಕೆ ಮಾಡಲಾಗಿದೆ ಎಂದರು.
ಇತ್ತೀಚೆಗಷ್ಟೇ ಮಂಗಳೂರು-ಉಡುಪಿ-ಕುಂದಾಪುರ-ಕಾರ್ಕಳ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ದರ ಏರಿಕೆ ಮಾಡಲಾಗಿದೆಯಲ್ಲ? ಜನವರಿಧಿಯಲ್ಲಿ ಉಡುಪಿ-ಮಂಗಳೂರು ನಡುವೆ 55 ರೂ., ಉಡುಪಿ-ಕುಂದಾಪುರಕ್ಕೆ 38 ರೂ. ಇತ್ತು. ಅದನ್ನು ಫೆಬ್ರವರಿಯಾಗುವಾಗ 60 ರೂ., 40 ರೂ.ಗೆ ಏರಿಸಲಾಗಿತ್ತಲ್ಲವೆ? ಮತ್ತೆ ಇನ್ನೊಮ್ಮೆ ದರ ಏರಿಕೆ ಯಾಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅದು ಸಾಮಾನ್ಯ ಏರಿಕೆ. ಈ ಹಿಂದೆ ಅನುಷ್ಠಾನಿಸಬೇಕಿದ್ದ ದರ ಅದಾಗಿದೆ. ಡೀಸೆಲ್, ತೆರಿಗೆ, ಲೋನ್ ಹಣ ವಿಪರೀತ ಹೆಚ್ಚಳವಾದ ಕಾರಣ ಪ್ರಾಧಿಕಾರ ನಿರ್ಧರಿಸಿದ ದರದಂತೆಯೇ ಜನವರಿ ಕೊನೇ ವಾರದಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಟೋಲ್ ಸೆಸ್ ಸೇರ್ಪಡೆಯಾಗುವ ಕಾರಣ ಫೆ. 17ರಿಂದ ಉಡುಪಿ-ಮಂಗಳೂರಿಗೆ ರೂ. 63 (ಪ್ರಸ್ತುತ ರೂ. 60)., ಉಡುಪಿ-ಕುಂದಾಪುರಕ್ಕೆ ರೂ. 43 (ಪ್ರಸ್ತುತ ರೂ. 40) ಆಗಲಿದೆ ಎಂದರು.
ಸಿಸಿಟಿ – 25,000 ಪ್ರಯಾಣಿಕರು: ಸಿಸಿಟಿ ಆರ್‌ಎಫ್ಐಡಿ ಕಾರ್ಡ್ ಮೂಲಕ ಖಾಸಗಿ ಬಸ್‌ಗಳಲ್ಲಿ ಶೇ. 35 ರಿಯಾಯಿತಿಯಲ್ಲಿ ಪ್ರತಿನಿತ್ಯ 25,000 ಮಂದಿ ಪ್ರಯಾಣಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಕ್ಯಾಶ್ ಕಾರ್ಡ್ ಕೂಡ ಜಾರಿಗೆ ತರಲಾಗುವುದು ಎಂದು ಹೇಳಿದರು. ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಬಸ್ ಮಾಲಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣನಾಥ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.