ಬೆಳ್ತಂಗಡಿ: ಬಾಲ್ಯದಲ್ಲಿಯೇ ಮಗುವಿನಲ್ಲಿ ದೇಶದ ಬಗ್ಗೆ ಪ್ರೀತಿ ಗೌರವವನ್ನು ಬೆಳೆಸಿದರೆ ಮಾತ್ರ ಮಗುವಿನ ಮನಸ್ಸಿನಲ್ಲಿ ಅದು ಅಚ್ಚಳಿಯದೇ ಉಳಿಯುತ್ತದೆ. ಅಂತಹ ಕಾರ್ಯವನ್ನು ಇಂತಹ ಸ್ಕೌಟ್ಸ್ ಸಂಸ್ಥೆಗೆ ಸೇರಿದ ಮಕ್ಕಳು ಮೈಗೂಡಿಸಿಕೊಳ್ಳುತ್ತಾರೆ ಎಂದು ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಹೇಳಿದರು. ಅವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಂತ್ಯಾರಿನ ವ್ಯಾಪ್ತಿಗೊಳಪಟ್ಟ ಶಾಲೆಗಳ ವಾರ್ಷಿಕ ರೋವರ್, ರೇಂಜರ್ಸ ಮಾಗಮ, ಸ್ಕೌಟ್ಸ್ ಗೈಡ್ಸ್ ಮೇಳ ಮತ್ತು ಕಬ್ಸ್ ಬುಲ್ ಬುಲ್ಸ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಆರಂಭದಿಂದಲೇ ಮೈಗೂಡಿಸಿ
ಪ್ರತಿಯೋರ್ವ ಹೆತ್ತವರು ತಮ್ಮ ಮಕ್ಕಳನ್ನು ಸ್ಕೌಟ್ಸ್ ಗೈಡ್ಸ್‌ನಂತಹ ಸಂಸ್ಥೆಗೆ ಸೇರಿಸಿ ದೇಶಸೇವೆಯ ಚಿಂತನೆಯನ್ನು ಆರಂಭದಿಂದಲೇ ಮೈಗೂಡಿಸಿಕೊಳ್ಳಲು ಸಹಕರಿಸಬೇಕು. ಆ ಕಾರ್ಯವಿಂದು ಓಡಿಲ್ನಾಳ ಶಾಲೆಯಲ್ಲಿ ಪ್ರಜ್ವಲಿಸುತ್ತಿದೆ. ಅದಕ್ಕೆ ಕಾರಣ ಮಡಂತ್ಯಾರು ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ಸಂಸ್ಥೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಸದಸ್ಯ ಜಿ. ಗೋಪಿನಾಥ ನಾಯಕ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಉಪಾಧ್ಯಕ್ಷೆ ಅಕ್ಷತಾ ಕೆ. ಶೆಟ್ಟಿ, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಜಿ., ಸ್ಕೌಟ್ಸ್ ಸಂಸ್ಥೆಯ ಕಾರ್ಯದರ್ಶಿ ಎಂ. ಶಾಂತಾರಾಮ ಪ್ರಭು, ಜತೆ ಕಾರ್ಯದರ್ಶಿ ಬೆನೆಡಿಕ್ಟ್ ಜೋಯ್ಸ ತಾವ್ರೋ, ಕೋಶಾಧಿಕಾರಿ ಸುಜಾತಾ, ಸಹ ಕಾರ್ಯದರ್ಶಿ ಧರಣೇಂದ್ರ ಕೆ., ರ್ಯಾಲಿ ನಿರ್ದೇಶಕ, ಓಡಿಲ್ನಾಳ ಶಾಲಾ ಮುಖ್ಯೋಪಾಧ್ಯಾಯ ದತ್ತಾತ್ರೇಯ ಗೊಲ್ಲ, ಓಡಿಲ್ನಾಳ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರುದೇಶ್ ಕುಮಾರ್, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಜ್‌ಪ್ರಕಾಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸುಮಿತ್ ಡಿ’ಸೋಜಾ, ಬಿಆರ್‌ಪಿ ಶಂಭುಶಂಕರ್, ಗುರುವಾಯನಕೆರೆ ಸಿಆರ್‌ಪಿ ರಾಜೇಶ್, ಪುಂಜಾಲಕಟ್ಟೆ ಸಿಆರ್‌ಪಿ ರಘುಪತಿ ಕೆ. ರಾವ್ ಮೊದಲಾದವರು ಉಪಸ್ಥಿತರಿದ್ದರು. ಜಾಥಾ ನಿರ್ದೇಶಕ ದತ್ತಾತ್ರೇಯ ಗೊಲ್ಲ ಸ್ವಾಗತಿಸಿ, ಸಂಸ್ಥೆಯ ಕಾರ್ಯದರ್ಶಿ ಎಂ. ಶಾಂತಾರಾಮ ಪ್ರಭು ರ್ಯಾಲಿಯ ಮುನ್ನೋಟವನ್ನು ಮಂಡಿಸಿದರು. ನಿರಂಜನ್ ಬಜಿರೆ ವಂದಿಸಿದರು. ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರ್ವಹಿಸಿದರು. 2 ದಿನಗಳ ಕಾಲ ಜಾಥಾ ನಡೆಯಿತು.