Advertisement

ಸೇವಾ ಭದ್ರತೆ ಕಲ್ಪಿಸದೆ ಸೇವೆಗೆ ಮರಳೆವು

10:54 PM Jan 15, 2022 | Team Udayavani |

ಬೆಂಗಳೂರು: ಪಶ್ಚಿಮ ಬಂಗಾಲ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸದೆ ಸೇವೆಗೆ ಮರಳುವುದಿಲ್ಲ. ನಮ್ಮ ಹೋರಾಟ ಸೇವಾ ಭದ್ರತೆ ಗಾಗಿತ್ತೇ ಹೊರತು ವೇತನ ಹೆಚ್ಚಳಕ್ಕಲ್ಲ. ಹೀಗಾಗಿ ಹೋರಾಟ ಮುಂದುವರಿಯಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘ ಸ್ಪಷ್ಟಪಡಿಸಿದೆ.

Advertisement

ರಾಜ್ಯದ ಸರಕಾರಿ ಪದವಿ ಕಾಲೇಜು ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 11ರಿಂದ 13 ಸಾವಿರವಿದ್ದ ವೇತನವನ್ನು 26ದಿಂದ 32 ಸಾ.ರೂ.ಗಳ ವರೆಗೆ ಹೆಚ್ಚಿಸಿದೆ.

ಹೋರಾಟಕ್ಕೆ ಇಳಿಯುವ ಮೊದಲು ಹಾಗೂ ತರಗತಿ ಬಹಿಷ್ಕರಿಸಿದ ವೇಳೆ ಸರಕಾರ ಮಾತುಕತೆಗೆ ಆಹ್ವಾನಿಸಿ ದಾಗಲೂ 60 ವರ್ಷಗಳ ವರೆಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದೆವು. ಆದರೆ, ಸರಕಾರದ ಆದೇಶದಲ್ಲಿ ಸೇವಾ ಭದ್ರತೆ ಕುರಿತ ಯಾವುದೇ ಪ್ರಸ್ತಾವವಿಲ್ಲ. ಅಲ್ಲದೆ, ಪ್ರಸ್ತುತ ನೇಮಕವಾದ ಅತಿಥಿ ಉಪನ್ಯಾಸಕರು ಆಯಾ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುಂದಿನ ವರ್ಷಕ್ಕೂ ಉಳಿಸಿಕೊಳ್ಳುತ್ತಿದ್ದಾರೆ. ಹೊಸ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬೇಕಿದೆ. ನೂತನ ನಿಯಮದಿಂದ ಮತ್ತಷ್ಟು ಉದ್ಯೋಗ ಅಭದ್ರತೆ ಸೃಷ್ಟಿಸಿದೆ ಎಂದು ಅತಿಥಿ ಉಪನ್ಯಾಸಕರು ಹೇಳಿದ್ದಾರೆ.

ಅರ್ಧಕ್ಕರ್ಧ ಸಿಬಂದಿಗೆ ಕೆಲಸವಿಲ್ಲ
ಸದ್ಯ 7ರಿಂದ 8 ಗಂಟೆ ಕೆಲಸವನ್ನು 15 ಗಂಟೆಗೆ ಹೆಚ್ಚಿಸಲಾಗಿದೆ. ಇದರಿಂದ ಈಗಿನ 14,800 ಮಂದಿಯಲ್ಲಿ ಅರ್ಧಕ್ಕರ್ಧ ಅಂದರೆ, ಕನಿಷ್ಠ 7,000 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ನೇಮಕ ಆಗುವವರೂ ನೆಮ್ಮದಿಯಿಂದ ಕೆಲಸ ಮಾಡುವಂತಿಲ್ಲ ಸಂಘದ ಅಧ್ಯಕ್ಷ ಶಿವಪ್ಪ ಹೇಳಿದ್ದಾರೆ.

ಇದನ್ನೂ ಓದಿ:ಮುಷ್ಕರ ಬಿಟ್ಟು ಬೋಧನೆಗೆ ಹಿಂದಿರುಗಿ : ಅತಿಥಿ ಉಪನ್ಯಾಸಕರಿಗೆ ಸಚಿವರ ಮನವಿ

Advertisement

ಸರಕಾರದಿಂದ ಪ್ರತಿತಂತ್ರ
ವೇತನ ಹೆಚ್ಚಳ ಬಳಿಕವೂ ಸೇವೆಗೆ ಮರಳಲು ಷರತ್ತು ವಿಧಿಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸರಕಾರವು ಪ್ರತಿತಂತ್ರ ರೂಪಿಸಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಇಚ್ಛಿಸುವವರಿಗೆ ಜ.17ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಿದ್ದು, ಸೂಚಿತ ಮಾನದಂಡಗಳಿಗೆ ಅನುಗುಣವಾಗಿ ನೇಮಕಾತಿ ನಡೆಯಲಿದೆ. ವಿದ್ಯಾರ್ಹತೆ ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಕಾಲೇಜು ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ನೋಂದಣಿ ಲಿಂಕ್‌ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ತಮಗೆ ಅನುಕೂಲವಾಗುವ ಐದು ಕಾಲೇಜುಗಳನ್ನು ಅತಿಥಿ ಉಪನ್ಯಾಸಕರು ಆರಿಸಿಕೊಳ್ಳಬಹುದು. ಈ ಪೈಕಿ ಒಂದನ್ನು ನೀಡಲಾಗುತ್ತದೆ. ಇಲಾಖೆ ಸೂಚಿಸಿದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಬೇಕಾಗುತ್ತದೆ.

ಹೋರಾಟಕ್ಕೆ ಪೆಟ್ಟು
ಸರಕಾರದ ನೂತನ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಲು ಅತಿಥಿ ಉಪನ್ಯಾಸಕರಲ್ಲಿಯೇ ಗೊಂದಲ ಮೂಡಿದೆ. ವೇತನ ಹೆಚ್ಚಳದ ಬಳಿಕ ಕೆಲವರು ಕಾರ್ಯ ನಿರ್ವಹಿಸಲು ಇಚ್ಛಿಸುತ್ತಿದ್ದರೆ, ಕೆಲವರು ಮಾತ್ರ ಸೇವಾ ಭದ್ರತೆ ಕೇಳುತ್ತಿದ್ದಾರೆ. ಆದರೆ, ಹೊಸ ನಿಯಮಗಳ ಪ್ರಕಾರ 8 ಸಾವಿರ ಮಂದಿಗೆ ಕೆಲಸ ಸಿಗಬಹುದು ಅಷ್ಟೇ. ಈಗಿರುವ 14,800 ಅತಿಥಿ ಉಪನ್ಯಾಸಕರಲ್ಲಿ ಆಸಕ್ತರು ನೋಂದಣಿ ಮಾಡಿಕೊಂಡರೆ, ಹೋರಾಟಕ್ಕೆ ಪೆಟ್ಟು ಬೀಳುವ ಸಾಧ್ಯತೆಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next