Advertisement

ತಾಂತ್ರಿಕ ಸಮಸ್ಯೆಯಿಂದ ಸೇವಾ ಸಿಂಧು ಸ್ಥಗಿತ

02:12 AM Oct 10, 2020 | mahesh |

ಕೋಟ: ಸರಕಾರದ ಎಲ್ಲ ಯೋಜನೆಗಳನ್ನು ಒಂದೇ ಸೂರಿನಡಿ ಒದಗಿಸುವ ಸೇವಾ ಸಿಂಧು ಆನ್‌ಲೈನ್‌ ತಂತ್ರಾಂಶದಲ್ಲಿ ಒಂದು ತಿಂಗಳಿಂದ ತಾಂತ್ರಿಕ ಸಮಸ್ಯೆ ಎದುರಾಗಿದೆ. ಶುಲ್ಕ ಪಾವತಿಸುವ ವ್ಯಾಲೆಟ್‌ ಸ್ಥಗಿತಗೊಂಡು ಯಾವುದೇ ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ. ಯಾವುದೇ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ.

Advertisement

ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಸರಕಾರ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ಆದರೆ ಪ್ರಸ್ತುತ ಅರ್ಜಿದಾರನ ವಿವರಗಳನ್ನು ನಮೂದಿಸಲು ಮಾತ್ರ ಅವಕಾಶವಿದೆ. ಶುಲ್ಕ ಪಾವತಿಸುವ ವ್ಯಾಲೆಟ್‌ ಕಾರ್ಯಾಚರಿಸದಿರುವುದರಿಂದ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

ಕೆಲವು ಇಲಾಖೆಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಿರುವುದರಿಂದ ಜನರ ಸಮಸ್ಯೆ ಮತ್ತಷ್ಟು ಸಮಸ್ಯೆ ಹೆಚ್ಚಿದೆ. ಕಾರ್ಮಿಕ ಕಾರ್ಡ್‌, ಆಯುಷ್ಮಾನ್‌ ಕಾರ್ಡ್‌, ಹಿರಿಯ ನಾಗರಿಕರ ಕಾರ್ಡ್‌, ವಿದ್ಯಾರ್ಥಿ ವೇತನ, ಆರೋಗ್ಯ ಸೇವೆ, ಹಿರಿಯ ನಾಗರಿಕರ ಸವಲತ್ತು ಮುಂತಾದ ಪ್ರಮುಖ ಸೇವೆಗಳನ್ನು ಪಡೆಯಲು ಕಚೇರಿಗಳಿಗೆ ಹಲವಾರು ಬಾರಿ ಅಲೆದಾಡಬೇಕಿದೆ.

ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡುತ್ತಿರುವುದರಿಂದ ಸೇವಾ ಕೇಂದ್ರದವರು ಕೂಡ ಸಾಕಷ್ಟು ಪ್ರಮಾಣದಲ್ಲಿ ಅರ್ಜಿಗಳನ್ನು ಪಡೆದು ಕಾಯ್ದಿರಿಸಿಕೊಂಡಿದ್ದಾರೆ. ಅವು ವಿಲೇವಾರಿಯಾಗಲು ಬಾಕಿ ಇವೆ. ಜನರು ತಮ್ಮ ಅರ್ಜಿಗಳ ಸ್ಥಿತಿಗತಿ ತಿಳಿಯಲು ಪ್ರತೀ ದಿನ ಸಾಮಾನ್ಯ ಸೇವಾಕೇಂದ್ರಗಳಿಗೆ ಭೇಟಿ ನೀಡುವಂತಹ ಸ್ಥಿತಿಯಿದೆ.

ಮತ್ತೆ ಮತ್ತೆ ಸರಕಾರಿ ಕಚೇರಿಗೆ ಅಲೆದಾಟ
ಸೇವಾ ಸಿಂಧು ಮೂಲಕ ದಾಖಲೆ ನೀಡಿಕೆ ಕ್ರಮ ಜಾರಿಗೆ ತಂದದ್ದರಿಂದ ಭ್ರಷ್ಟಾಚಾರ, ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಕಡಿಮೆಯಾಗಿತ್ತು. ಈಗ ಅದು ಸ್ಥಗಿತಗೊಂಡಿದ್ದು, ಜನಸಾಮಾನ್ಯರು ಮತ್ತೆ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಸಣ್ಣ-ಪುಟ್ಟ ದಾಖಲೆಗಳನ್ನು ಪಡೆಯುವುದಕ್ಕೂ ಪರದಾಡಬೇಕಿದೆ.

Advertisement

ಸಮಸ್ಯೆ ಸರಿಪಡಿಸಲಾಗುತ್ತಿದೆ
ತಾಂತ್ರಿಕ ಸಮಸ್ಯೆಯಿಂದ ಸೇವಾಸಿಂಧು ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಈಗಾಗಲೇ ತಂತ್ರಾಂಶದ ದೋಷ ವನ್ನು ಗುರುತಿಸಿ ಸರಿಪಡಿಸುವ ಕಾರ್ಯದಲ್ಲಿ ತಜ್ಞರ ತಂಡ ತೊಡಗಿಕೊಂಡಿದ್ದು, ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥವಾಗುವ
ಸಾಧ್ಯತೆ ಇದೆ.
ಎಸ್‌.ಪಿ. ಕುಲಕರ್ಣಿ, ಖಾಸಗಿ ಸೇವಾ ಕೇಂದ್ರಗಳ ರಾಜ್ಯ ಮುಖ್ಯಸ್ಥರು

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next