Advertisement

ಅನ್ನಭಾಗ್ಯಕ್ಕೆ ಸರ್ವರ್‌ ಸಂಕಟ :ಗ್ರಾಮೀಣ ಭಾಗದಲ್ಲಿ ಸಮಸ್ಯೆ , ಪಡಿತರ ವಿತರಣೆಗೆ ತೊಡಕು

12:42 AM Dec 25, 2020 | sudhir |

ಕಾರ್ಕಳ: ಪಡಿತರ ವಿತರಣೆ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎನ್ನು ವಂತಾಗಿದೆ. ಈಗ ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ ಅಡ್ಡಿಯಾಗುತ್ತಿದ್ದು, ಗ್ರಾಮೀಣ ಭಾಗದ ಜನ ನಿತ್ಯದ ಕೆಲಸ ಕಾರ್ಯ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಡಿತರ ವಿತರಣೆಯ ಬಯೋಮೆಟ್ರಿಕ್‌ ವಿಧಾನದಲ್ಲಿ ಪದೇ ಪದೆ ಕಂಡುಬರುತ್ತಿರುವ ತಾಂತ್ರಿಕ ಸಮಸ್ಯೆ ಇಂದಿಗೂ ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲಿಯೇ ಈ ಸಮಸ್ಯೆ ಹೆಚ್ಚು.

Advertisement

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್‌ಸೈಟ್‌ನ ತಾಂತ್ರಿಕ ದೋಷದಿಂದ ಸದಾ ಕಾಲ ಸರ್ವರ್‌ ಬಿಝಿ ಬರುತ್ತಿದೆ. ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರಿಗೆ ತಾಂತ್ರಿಕ ಕಾರಣ ಹೇಳಿ ಸುಸ್ತಾಗಿದ್ದಾರೆ. ದಾಸ್ತಾನಿದ್ದರೂ ಸಕಾಲದಲ್ಲಿ ವಿತರಣೆಗೆ ಕಷ್ಟವಾಗುತ್ತಿದೆ. ಸಾಲಿನಲ್ಲಿ ಕಾದು ನಿಂತರೂ ನ್ಯಾಯಬೆಲೆ ಅಂಗಡಿಯವರು ಬೆರಳಚ್ಚು ಪಡೆದುಕೊಳ್ಳುತ್ತಿಲ್ಲ, ಸಬೂಬು ಹೇಳುತ್ತಾರೆ, ಪಡಿತರ ಸಿಗುವಾಗ ತೀರಾ ವಿಳಂಬವಾಗುತ್ತಿದೆ ಎಂಬುದು ಗ್ರಾಹಕರ ಅಳಲು.

ಬಯೋಮೆಟ್ರಿಕ್‌ ವಿಧಾನದ ಬದಲು ಮೊಬೈಲ್‌ ಒಟಿಪಿ ಕೊಟ್ಟು ಪಡಿತರ ನೀಡುವ ಮಾರ್ಗ ಅನುಸರಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ನಮಗೆ ತೊಂದರೆಯಾಗದಂತೆ ವಿತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ನಾಗರಿಕರು. ಈಗಿನ ಬಯೋಮೆಟ್ರಿಕ್‌ ವಿಧಾನ ತ್ರಾಸದಾಯಕವಾಗಿದೆ. ಕೆಲವು ಹಿರಿಯರ ಬೆರಳಚ್ಚು ಸ್ವಿಕಾರವಾಗುತ್ತಿಲ್ಲ. ಪಕ್ಕದ ಕೇರಳದಲ್ಲಿ ಒಟಿಪಿ ಮೂಲಕ ಪಡಿತರ ವಿತರಣೆಯಾಗುತ್ತಿದ್ದು, ಇಲ್ಲೂ ಅದೇ ವಿಧಾನ ಅನುಸರಿಸಬೇಕು ಎನ್ನುವ ಒತ್ತಾಯವಿದೆ.

ಬಯೋಮೆಟ್ರಿಕ್‌ ಹೊರತಾದ ಆಯ್ಕೆಗಳು ಮೂರ್‍ನಾಲ್ಕು ಇದ್ದರೂ ಅನುಸರಿಸದಿರುವುದರ ಹಿಂದೆ ಅಧಿಕಾರಿಗಳ ನಿರ್ಲಕ್ಷ ಇದೆ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿಯವರೊಬ್ಬರು.

ಸಮಸ್ಯೆನಿವಾರಣೆಯಾಗಿಲ್ಲ
ದಕ್ಷಿಣ ಕನ್ನಡದಲ್ಲಿ ಸಮಸ್ಯೆ ಅಷ್ಟೇನೂ ಇಲ್ಲ ಎಂದು ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿ ರಮ್ಯಾ ತಿಳಿಸಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಯವರು ಮತ್ತು ಪಡಿತರ ಚೀಟಿದಾರರ ಪ್ರಕಾರ ಸಮಸ್ಯೆ ಇದೆ; ಸರ್ವರ್‌ ಆಗಾಗ ಕೈಕೊಡುತ್ತಿದೆ.

Advertisement

ಸರ್ವರ್‌ ಸಮಸ್ಯೆ ಬಗ್ಗೆ ಇನ್ನಿತರ ಜಿಲ್ಲೆಗ ಳಿಂದಲೂ ಮಾಹಿತಿ ಲಭ್ಯವಾಗಿದೆ. ಆಯಾ ತಿಂಗಳ ಪಡಿತರ ಹಂಚಿಕೆಯನ್ನು ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕಿರುವುದರಿಂದ ಸಮಸ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮ್ಯಾನುವಲ್‌ ಆಗಿ ವಿತರಿಸಿ ವಿವರಗ ಳನ್ನು ದತ್ತಾಂಶದಲ್ಲಿ ಅಪ್‌ಲೋಡ್‌ ಮಾಡುವಂತೆ ಜಿಲ್ಲೆಗಳ ಜಂಟಿ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.
-ಡಾ| ಶಮ್ಲಾ ಇಕ್ಬಾಲ್‌, ಆಯುಕ್ತರು, ಆಹಾರ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next