Advertisement

ಸಿಇಟಿಗೆ ಅರ್ಜಿ ಸಲ್ಲಿಕೆಗೆ ಸರ್ವರ್‌ ಕಾಟ

05:09 PM Apr 21, 2022 | Team Udayavani |

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಲ್ಲಿ 6-8ನೇ ತರಗತಿಗೆ ಶಿಕ್ಷಕರ ನೇಮಕಾತಿಗಾಗಿ 15 ಸಾವಿರ ಹುದ್ದೆಗೆ ಅಧಿಸೂಚನೆ ಹೊರಡಿಸಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

Advertisement

ಸಿಇಟಿ ಅರ್ಜಿ ಸಲ್ಲಿಕೆಗೆ ಸರ್ವರ್‌ ಬ್ಯೂಸಿ ಎಂದು ತೋರಿಸುತ್ತಿದ್ದು, ಏ.22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಆಕಾಂಕ್ಷಿತ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು 2 ಹಾಗೂ 3 ವರ್ಷಗಳಿಗೊಮ್ಮೆ ಸಿಇಟಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರದ ನೇಮಕಾತಿ ಪ್ರಕ್ರಿಯೆಯನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಅದರಲ್ಲೂ ಎರಡು ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಬಹುಪಾಲು ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.

ಈಗಷ್ಟೇ ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ 15 ಸಾವಿರ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಿದೆ. ಮಾ.23ರಂದೇ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಸಿಇಟಿ ಬರೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ಟಿಇಟಿ ಅರ್ಹತೆ ಪಡೆದಿರಬೇಕು. ಟಿಇಟಿ ಅರ್ಹತೆ ಪಡೆದ ಅಭ್ಯರ್ಥಿಗಳೇ ಲಕ್ಷಾಂತರ ಜನರಿದ್ದಾರೆ. ಆರಂಭದ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳವಾಗಿ ಸಲ್ಲಿಕೆಯಾಗುತ್ತಿದ್ದವು. ಆದರೆ ಕೆಲ ದಿನಗಳಿಂದ ಯಾವುದೇ ಅರ್ಜಿಗಳು ಅಪ್‌ ಲೋಡ್‌ ಆಗುತ್ತಿಲ್ಲ. ಇದರಿಂದ ಲಕ್ಷಾಂತರ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಹುದ್ದೆಗಳಿವೆ. ಹೀಗಾಗಿ ಹೈ-ಕ ಮೀಸಲಾತಿ ಅನುಸಾರ ನಮಗೆ ಈ ಬಾರಿ ನಿರೀಕ್ಷೆಯಂತೆ ಶಿಕ್ಷಕರ ಹುದ್ದೆಗಳು ದೊರೆಯಲಿವೆ ಎಂದು ಹಲವು ಅಭ್ಯರ್ಥಿಗಳು ಭರವಸೆಯಿಂದಲೇ ಕಾದು ಕುಳಿತ್ತಿದ್ದಾರೆ. ಆದರೆ ಅರ್ಜಿಯೇ ಸ್ವೀಕಾರವಾಗದೆ ಇರುವುದು ಆತಂಕ ಹೆಚ್ಚಿಸಿದೆ. ಇಡೀ ದಿನ ಸೈಬರ್‌ ಸೆಂಟರ್‌ಗಳಲ್ಲಿ ಅರ್ಜಿ ಅಪ್‌ ಲೋಡ್‌ ಆಗುತ್ತಿಲ್ಲ.

Advertisement

ಹೆಲ್ಪ್ ಲೈನ್ ಸ್ಪಂದನೆ ಸಿಗುತ್ತಿಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಏನಾದರೂ ತಾಂತ್ರಿಕ ಸಮಸ್ಯೆ ಎದುರಾದರೆ ಹೆಲ್‌ಲೈನ್‌ ಸಂಖ್ಯೆಗೆ ಕರೆ ಮಾಡಿ ಎಂದು ಕೆಲ ನಂಬರ್‌ಗಳನ್ನು ಪ್ರಕಟಿಸಲಾಗಿದೆ. ಆದರೆ ಆ ನಂಬರ್‌ಗಳಿಗೆ ಕರೆ ಮಾಡಿದರೆ ಯಾರಿಂದಲೂ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದಾಗಿ ಅಭ್ಯರ್ಥಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.

ತಾಂತ್ರಿಕ ಸಮಸ್ಯೆ ಸರಿಪಡಿಸಿ: ಅರ್ಜಿ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿಯಿದ್ದು, ಇನ್ನೂ ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಬಾಕಿಯಿದೆ. ಸರ್ವರ್‌ ಬ್ಯುಸಿ ಎಂದು ಬರುತ್ತಿದ್ದು, ತಾಂತ್ರಿಕ ತಂಡವು ಸರ್ವರ್‌ ಬ್ಯುಸಿ ಇರುವುದನ್ನು ಕೂಡಲೇ ಸರಿಪಡಿಸಬೇಕು. ಇಲ್ಲವೇ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಬೇಕು ಎಂದು ಅಭ್ಯರ್ಥಿಗಳು ಒತ್ತಾಯ ಮಾಡಿದ್ದಾರೆ. ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಸಚಿವರು ತಾಂತ್ರಿಕ ಸಮಸ್ಯೆ ಗಮನಿಸಿ ಕೂಡಲೇ ಆಕಾಂಕ್ಷಿತ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನಿಗಾ ವಹಿಸಿ ಸಮಸ್ಯೆ ಇತ್ಯರ್ಥಮಾಡಬೇಕಿದೆ.

ಕೆಲವು ದಿನಗಳಿಂದ ಸಿಇಟಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೂ ಏಲ್ಲಿಯೂ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಸರ್ವರ್‌ ಬ್ಯುಸಿ ಎಂದು ಬರುತ್ತಿದೆ. ಬರೀ ನೆಟ್‌ ಸೆಂಟರ್‌ಗಳ ಮುಂದೆ ಕಾದು ಕುಳಿತು ಸುಸ್ತಾಗುವಂತಾಗಿದೆ. ಏ.22 ಅರ್ಜಿ ಸಲ್ಲಿಕೆ ಕೊನೆಯ ದಿನವಾಗಿದ್ದು, ಇದರಿಂದ ಆತಂಕದಲ್ಲಿದ್ದೇವೆ. ಕೂಡಲೇ ತಾಂತ್ರಿಕ ಸಮಸ್ಯೆ ಇತ್ಯರ್ಥ ಮಾಡಿ, ಇಲ್ಲವೇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲಿ. -ಯಶೋಧಾ ಕಂಬಳಿ, ಆಕಾಂಕ್ಷಿ ಅಭ್ಯರ್ಥಿ

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next