Advertisement

ಸರಕಾರಿ ನೌಕರಿ ಅರ್ಜಿ ಸಲ್ಲಿಕೆಗೆ ‘ಸರ್ವರ್‌’ಸಮಸ್ಯೆ

07:50 AM Dec 24, 2018 | Karthik A |

ಬಳ್ಳಾರಿ: ಕರ್ನಾಟಕ ಲೋಕಸೇವಾ ಆಯೋಗ ಕಳೆದ ನವೆಂಬರ್‌ನಲ್ಲಿ ‘ಬಿ’ ಮತ್ತು  ‘ಸಿ’ ಗ್ರೂಪ್‌ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಆಹ್ವಾನಿಸಲಾಗಿದ್ದ ಅರ್ಜಿ ಸಲ್ಲಿಕೆಗೆ ‘ಸರ್ವರ್‌’ ಸಮಸ್ಯೆ ತೊಡಕಾಗಿದೆ. ಕಳೆದ 1 ವಾರದಿಂದ ಕಾಡಿದ ಸರ್ವರ್‌ ಸಮಸ್ಯೆಯಿಂದ ಕೊನೆಯ ದಿನವಾದ ಡಿ.22ರ ತನಕವೂ ಸಾವಿರಾರು ಮಂದಿ ಅರ್ಜಿ ಸಲ್ಲಿಸಲು ಕಾದು ಕುಳಿತಿದ್ದರು. ಅರ್ಜಿ ಸಲ್ಲಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಗಡುವನ್ನು ಮತ್ತೂಂದು ವಾರ ವಿಸ್ತರಿಸಬೇಕೆಂಬ ಒತ್ತಡ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.

Advertisement

ಕೆಪಿಎಸ್‌ಸಿ ಅಲ್ಪಸಂಖ್ಯಾಕರ ಇಲಾಖೆಯ ಎ.ಪಿ.ಜೆ. ಅಬ್ದುಲ್‌ ಕಲಾಂ ಶಾಲೆಗಳಲ್ಲಿ ಖಾಲಿಯಿರುವ  ಬಿ’ ಗ್ರೂಪ್‌ (ಮುಖ್ಯೋಪಾಧ್ಯಾಯರು) ಮತ್ತು  ಸಿ’ ಗ್ರೂಪ್‌ (ಸಹ ಶಿಕ್ಷಕರು) ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು. ಕಳೆದ ನ. 23ರಿಂದ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಿತ್ತು. ಅಂದಿನಿಂದ ಆರಂಭದಲ್ಲಿ ಒಂದಷ್ಟು ದಿನಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದ ಅಂತರ್ಜಾಲ ಅನಂತರದ ದಿನಗಳಲ್ಲಿ ಇಡೀ ದಿನ ‘ಸರ್ವರ್‌ ಬ್ಯುಸಿ’ ಎಂದು ತೋರಿಸುತ್ತಿತ್ತು. ಇದರಿಂದ ಅರ್ಜಿ ಸಲ್ಲಿಸಿದರೂ ಅರ್ಜಿಗಳು ಜನರೇಟ್‌ ಆಗಿಲ್ಲ. ಅರ್ಜಿ ಸಲ್ಲಿಕೆಗಾಗಿ ಸಾಕಷ್ಟು  ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಏಳು ಹಂತದಲ್ಲಿ ಅರ್ಜಿ ಸಲ್ಲಿಕೆ
ಗ್ರೂಪ್‌  ಬಿ’ ಮತ್ತು ಗ್ರೂಪ್‌  ಸಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿಯು ಅರ್ಜಿ ಸಲ್ಲಿಸುವ ತಂತ್ರಜ್ಞಾನದಲ್ಲಿ ಒಟ್ಟು ಏಳು ಹಂತಗಳನ್ನು ರೂಪಿಸಿದೆ. ಅಭ್ಯರ್ಥಿಗಳು ಮೊದಲ ಹಂತದಲ್ಲಿ ಪ್ರೊಫೈಲ್‌ ಕ್ರಿಯೇಟ್‌ ಮಾಡಿ ಹೆಸರು ನೋಂದಾಯಿಸಬೇಕು. ಎರಡನೇ ಹಂತದಲ್ಲಿ ಸ್ವವಿವರ ಭರ್ತಿ ಮಾಡಬೇಕು. ಮೂರನೇ ಹಂತದಲ್ಲಿ ಶೈಕ್ಷಣಿಕ ಅರ್ಹತೆ, ನಾಲ್ಕನೇ ಹಂತದಲ್ಲಿ ಅಂಕಪಟ್ಟಿ ಅಪ್‌ಲೋಡ್‌ ಮಾಡಿ ಶುಲ್ಕ ಭರ್ತಿ ಮಾಡಲು ಚಲನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆರನೇ ಹಂತದಲ್ಲಿ ಶುಲ್ಕ ಪಾವತಿಸಿದ್ದ ಚಲನ್‌ ಅಪ್‌ಲೋಡ್‌ ಮಾಡಬೇಕು. ಏಳನೇ ಹಂತದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ಪ್ರಿಂಟ್‌ ಪಡೆಯಬೇಕು. ಆಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ 3ನೇ ಹಂತ ಪೂರ್ಣಗೊಳ್ಳುತ್ತಿದ್ದಂತೆ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿತ್ತು. ಎಷ್ಟು ಬಾರಿ ‘ರೀ ಫ್ರೆಶ್‌’ ಮಾಡಿದರೂ, ಗಂಟೆಗಟ್ಟಲೆ ಕಂಪ್ಯೂಟರ್‌ ಮುಂದೆ ಕಾದು ಕುಳಿತರೂ ಪ್ರಯೋಜನವಾಗಿಲ್ಲ ಎನ್ನುವುದು ಅಭ್ಯರ್ಥಿಗಳ ಅಳಲು.

ಸಹಾಯವಾಣಿ  ಸ್ತಬ್ಧ
ಕರ್ನಾಟಕ ಲೋಕಸೇವಾ ಆಯೋಗದವರು ಹುದ್ದೆಗಳ ಭರ್ತಿಗೆ ಅ ಧಿ ಸೂಚನೆ ಪ್ರಕಟಿಸಿದ ಬಳಿಕ ಏನೇ ಸಮಸ್ಯೆಯಿದ್ದರೂ ಸಹಾಯವಾಣಿಗೆ ಕರೆ ಮಾಡಬಹುದು ಎಂದು 8105358122 ಎಂಬ ಸಂಖ್ಯೆಯೊಂದನ್ನು ಅಂತರ್ಜಾಲದ ಹೋಮ್‌ಪೇಜ್‌ ಮೇಲೆ ನಮೂದಿಸಿದ್ದರು. ಆದರೆ ಸಮಸ್ಯೆಯಾದಾಗ ಈ ಸಂಖ್ಯೆಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಲೇ ಇಲ್ಲ. ಹಾಗಾಗಿ ನಮ್ಮ ಗೋಳು ಕೇಳ್ಳೋರ್ಯಾರು ಎಂಬುದೇ ತಿಳಿಯುತ್ತಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.

— ವೆಂಕೋಬಿ ಸಂಗನಕಲ್ಲು

Advertisement
Advertisement

Udayavani is now on Telegram. Click here to join our channel and stay updated with the latest news.

Next