Advertisement

ಸರ್ವರ್‌ ಸಮಸ್ಯೆ: ಆಮೆಗತಿಯಲ್ಲಿ ಪಡಿತರ ಚೀಟಿ ವಿತರಣೆ ಕಾರ್ಯ

11:34 AM Nov 22, 2018 | Team Udayavani |

ಪುತ್ತೂರು: ವಿವಿಧ ರೀತಿಯ ಸರಕಾರಿ ಸೌಲಭ್ಯಗಳನ್ನು ಪಡೆಯ ಬೇಕಾದರೆ ಪಡಿತರ ಚೀಟಿ ಅತಿ ಆವಶ್ಯಕ. ಆದರೆ ಪಡಿತರ ಚೀಟಿ ಮಾಡಿಸುವಲ್ಲಿ ಕಾಡುತ್ತಿರುವ ಸರ್ವರ್‌ ಸಮಸ್ಯೆ ಹಲವು ಮಂದಿಯನ್ನು ಸರಕಾರದ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡುತ್ತಿದೆ.

Advertisement

ಪಡಿತರ ಚೀಟಿಗಾಗಿ ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಪುತ್ತೂರು ತಾ|ನ ಆಹಾರ ಇಲಾಖೆಯ ಕಚೇರಿಯಲ್ಲಿ ದಿನಂಪ್ರತಿ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪಡಿತರ ಚೀಟಿ ವಿತರಣೆ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಆಹಾರ ಇಲಾಖೆ ಕಚೇರಿಯಲ್ಲಿ 3,440ಕ್ಕೂ ಅಧಿಕ ಅರ್ಜಿಗಳು ವಿಲೇ ಆಗದೆ ಸ್ಥಗಿತಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಪಡಿತರ ಚೀಟಿ ತ್ವರಿತವಾಗಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಷ್ಟೊಂದು ಅರ್ಜಿಗಳು ವಿಲೇವಾರಿಗೆ ಬಾಕಿಯಾಗಿವೆ.

ಬೇಡಿಕೆ ಹೆಚ್ಚಿದೆ
ಪ್ರಸ್ತುತ ಪುತ್ತೂರು ತಾಲೂಕಿನಲ್ಲಿ ಎಪಿಎಲ್‌ 25,725, ಬಿಪಿಎಲ್‌ 37,356 ಹಾಗೂ ಅಂತ್ಯೋದಯ 4,131 ಪಡಿತರ ಚೀಟಿಗಳಿವೆ. ಕಳೆದ 3 ತಿಂಗಳಿನಿಂದ 739 ಹೊಸ ಪಡಿತರ ಚೀಟಿಗಳನ್ನು ನೀಡಲಾಗಿದ್ದರೂ ಪಡಿತರ ಚೀಟಿಯ ಬೇಡಿಕೆ ಸಲ್ಲಿಸಿ ಬರುವವರ ಸಂಖ್ಯೆ ಹೆಚ್ಚು ಇದೆ. ಸರ್ವರ್‌ ಸಮಸ್ಯೆಯಿಂದ ಪಡಿತರ ಚೀಟಿ ನೀಡಲು ಆಹಾರ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಎಪಿಎಲ್‌ ಪಡಿತರ ಚೀಟಿಗಳನ್ನು ನೇರವಾಗಿ ಸೈಬರ್‌ ಮೂಲಕ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ ಇದೆ. ಆದರೆ ಬಿಪಿಎಲ್‌ ಪಡಿತರ ಚೀಟಿಗಳನ್ನು ಆಹಾರ ಇಲಾಖೆಯ ಮೂಲಕವೇ ಪಡೆದುಕೊಳ್ಳಬೇಕಾಗಿದೆ. 

ಎನ್‌ಐಸಿ ವೈಫ‌ಲ್ಯ
ರಾಜ್ಯದಲ್ಲಿ ಎನ್‌ಐಸಿ (ನ್ಯಾಷನಲ್‌ ಇನ್ಫಾರ್ಮೇಶನ್‌ ಇಂಟರ್‌ನ್ಯಾಟಿಕ್‌) ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ಸರ್ವರ್‌ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರ ವೈಫಲ್ಯವೇ ಈ ಪಡಿತರ ಚೀಟಿ ಅವ್ಯವಸ್ಥೆಗೆ ಕಾರಣವಾಗುತ್ತಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲದ ಕಾರಣ ರಾಜ್ಯ ಸರಕಾರದ ಮಟ್ಟದಲ್ಲಿ ಮೊರೆ ಹೋಗುವುದು ಮಾತ್ರ ಇದಕ್ಕಿರುವ ದಾರಿ.

ಮೇಲಧಿಕಾರಿಗಳಿಗೆ ತಿಳಿಸಲಾಗಿದೆ
ಸರ್ವರ್‌ ಸರಿಯಾಗಿ ಕೆಲಸ ಮಾಡದ ಕಾರಣ ದಿನವೊಂದಕ್ಕೆ ಕೇವಲ 35 ಪಡಿತರ ಚೀಟಿ ಮಾಡಿಕೊಡಲು ಸಾಧ್ಯವಾಗುತ್ತಿದೆ. ಸಮಸ್ಯೆ ಪರಿಹಾರವಾದರೆ ದಿನಕ್ಕೆ ಕನಿಷ್ಠ 60 ಕುಟುಂಬಗಳಿಗೆ ಪಡಿತರ ಚೀಟಿ ನೀಡಲು ಸಾಧ್ಯವಾಗುತ್ತದೆ. ಸಮಸ್ಯೆಯ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವಿಷಯಗಳನ್ನು ತಿಳಿಸುತ್ತಾ, ನಿರಂತರ ಒತ್ತಡ ಹಾಕಲಾಗುತ್ತಿದೆ.
-ಸರಸ್ವತಿ,,
ಆಹಾರ ನಿರೀಕ್ಷಕಿ

Advertisement

‡ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next