ಹೊಸದಿಲ್ಲಿ : ಆಂತರಿಕ ಸರ್ವರ್ ಸಮಸ್ಯೆಯಿಂದಾಗಿ ವಿಶ್ವಾದ್ಯಂತ ಏರ್ ಇಂಡಿಯಾ ಸೇವೆಯಲ್ಲಿಶನಿವಾರ ಬೆಳಗ್ಗೆ ವ್ಯತ್ಯಯವಾಗಿದ್ದು ಸಾವಿರಾರು ಜನಪ್ರಯಾಣಿಕರು ಪರದಾಡಬೇಕಾಯಿತು.
ಶನಿವಾರ ನಸುಕಿನ ವೇಳೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಆ ಬಳಿಕ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿದೆ.
ಚಿತ್ರ ನಿರ್ಮಾಪಕ ವಿವೇಕ್ ಅಗ್ನಿ ಹೋತ್ರಿ ಅವರು ಟ್ವೀಟ್ ಮಾಡಿದ್ದು ಏರ್ ಇಂಡಿಯಾ ಸರ್ವರ್ 3.30 ರ ವೇಳೆಗೆ ಕ್ರ್ಯಾಶ್ ಆಗಿದ್ದು, ಎಲ್ಲಾ ವಿಮಾನಗಳಹಾರಾಟವನ್ನುಸ್ಥಗಿತಗೊಳಿಸಲಾಗಿದೆ. ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾಯಬೇಕಾಗಿದೆ. ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸ್ಪಷ್ಟನೆ ಪಡೆಯದೆ ವಿಮಾನ ನಿಲ್ದಾಣಕ್ಕೆ ತೆರಳಬೇಡಿ. ನಾನು ಕೂಡ ಕೆಲ ಸಮಯ ಕಳೆದು ವಾಪಾಸಾಗುತ್ತಿದ್ದೇನೆ ಎಂದು ಬರೆದಿದ್ದಾರೆ.
ಸಿಡ್ನಿಯಲ್ಲೂ ಏರ್‌ಇಂಡಿಯಾ ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನಗಳನ್ನು ಏರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಏರ್ ಇಂಡಿಯಾ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, ಎಸ್‌ಐಟಿಎ ಸರ್ವರ್ ಸಮಸ್ಯೆಕಾಣಿಸಿಕೊಂಡಿದ್ದು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲಿ ವ್ಯವಸ್ಥೆ ಸರಿಯಾಗಲಿದೆ. ಸೇವೆಯಲ್ಲಿನ ವ್ಯತ್ಯಯಕ್ಕೆ ತೀವ್ರ ವಿಷಾದ ವ್ಯಕ್ತ ಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.