Advertisement
ಚೆನ್ನೈನ 40 ವರ್ಷದ ವ್ಯಕ್ತಿಯು ಅ.1ರಂದು ಸೀರಮ್ ಆಯೋಜಿಸಿದ್ದ 3ನೇ ಹಂತದ ಪ್ರಯೋಗದಲ್ಲಿ ಲಸಿಕೆ ಸ್ವೀಕರಿಸಿದ್ದರು. ಕಳೆದ ಕೆಲವು ದಿನಗಳಿಂದ ಮೆದುಳಿನಲ್ಲಿನ ನರಕೋಶಗಳಿಗೆ ಆಘಾತವಾಗಿದ್ದು, ಎನ್ಸ್‌ಫಾಲೋಪಥಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ನೆನಪಿನ ಶಕ್ತಿ ತೀವ್ರವಾಗಿ ಕುಗ್ಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಸೀರಮ್ ಸಂಸ್ಥೆ, ಐಸಿಎಂಆರ್ ವಿರುದ್ಧ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿ, 5 ಕೋಟಿ ರೂ. ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಕೊವಿಶೀಲ್ಡ್ ಉತ್ಪಾದನೆ, ಹಂಚಿಕೆ ರದ್ದುಗೊಳಿಸುವಂತೆಯೂ ಒತ್ತಾಯಿಸಿದ್ದರು. ಈ ನಡುವೆ, ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಮತ್ತು ಸಾಂಸ್ಥಿಕ ನೈತಿಕ ಸಮಿತಿ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಮುಂದಾಗಿದೆ.
Related Articles
Advertisement
ಇಂದು 3 ಲಸಿಕೆ ಉತ್ಪಾದನ ಸಂಸ್ಥೆ ಜತೆ ಪ್ರಧಾನಿ ಚರ್ಚೆ : ಇಂದು 3 ಲಸಿಕೆ ಉತ್ಪಾದನ ಸಂಸ್ಥೆ ಜತೆ ಪ್ರಧಾನಿ ಚರ್ಚೆ ಭಾರತದ ಪ್ರತಿಷ್ಠಿತ ವ್ಯಾಕ್ಸಿನ್ ಹಬ್‌ಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮತ್ತೆ 3 ಲಸಿಕೆ ಉತ್ಪಾದನ ಸಂಸ್ಥೆಗಳ ಜತೆಗೆ ವರ್ಚುವಲ್ ಸಭೆ ನಡೆಸಲಿದ್ದಾರೆ. “ನ.30ರಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ಅಭಿವೃದ್ಧಿಪಡಿಸುತ್ತಿರುವ 3 ಸಂಸ್ಥೆಗಳ ತಂಡದೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಜೆನ್ನೋವಾ ಬಯೋಫಾರ್ಮಾ, ಬಯೋಲಾಜಿಕಲ್ ಇ ಮತ್ತು ಡಾ| ರೆಡ್ಡೀಸ್ ಸಂಸ್ಥೆಗಳ ತಂಡಗಳು ಪ್ರಧಾನಿ ಅವರೊಂದಿಗೆ ಸಂವಹನ ನಡೆಸಲಿವೆ’ ಎಂದು ಪಿಎಂಒ ಟ್ವೀಟ್‌ನಲ್ಲಿ ತಿಳಿಸಿದೆ. ಲಸಿಕೆ ಸಂಶೋಧನೆ ಪ್ರಗತಿ, ಕಾರ್ಯವಿಧಾನ ಮತ್ತು ಹಂಚಿಕೆ ಕುರಿತು ಪ್ರಧಾನಿ ಚರ್ಚೆ ನಡೆಸಲಿದ್ದಾರೆ.
ಪ್ರತಿಕಾಯ ಇರುವ ಮಗು ಜನನ! : ಕೋವಿಡ್ ಸೋಂಕಿಗೆ ಪ್ರತಿಕಾಯ ಹೊಂದಿರುವ ಮಗುವೊಂದು ಸಿಂಗಾಪುರದಲ್ಲಿ ಜನಿಸಿದೆ. ಕಳೆದ ಮಾರ್ಚ್‌ನಲ್ಲಿ ತಾಯಿಗೆ ಸೋಂಕು ದೃಢಪಟ್ಟಿತ್ತು. ಈಗ ಆಕೆ ಮಗುವಿಗೆ ಜನ್ಮ ನೀಡಿದ್ದು, ಅದರ ದೇಹದಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಇದು ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹಿಂದೆ ಗರ್ಭದ ಹೊರಗಿನ ದ್ರವ ಹಾಗೂ ಮೊಲೆಹಾಲಿನ ಮಾದರಿ ಸಂಗ್ರಹಿಸಿ ನಡೆಸಲಾದ ಅಧ್ಯಯನದಲ್ಲಿ, ತಾಯಿಯಿಂದ ಮಗುವಿಗೆ ಸೋಂಕು ಹರಡಲ್ಲ ಎಂದು ಸಾಬೀತಾಗಿತ್ತು. ಆದರೆ, ಈಗ ಶಿಶುವಿನಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಹೊಸ ಅಧ್ಯಯನಕ್ಕೆ ನಾಂದಿ ಹಾಡಿದೆ.
2000 ಥಿಯೇಟರ್ ಸ್ಕ್ರೀನ್ ಬಂದ್? : ಕೋವಿಡ್ ಲಾಕ್‌ಡೌನ್ ಪರಿಣಾಮ ಎಂಬಂತೆ, ಕೆಲವೇ ವಾರಗಳಲ್ಲಿ ದೇಶಾದ್ಯಂತ ಸುಮಾರು 1500ರಿಂದ 2000 ಥಿಯೇಟರ್ ಸ್ಕ್ರೀನ್‌ಗಳು ಬಾಗಿಲು ಮುಚ್ಚುವ ಸಾಧ್ಯತೆ ದಟ್ಟವಾಗಿದೆ. ಜನರ ಸ್ಪಂದನೆ ಬಗ್ಗೆ ಅನುಮಾನವಿರುವ ಕಾರಣ ಬಾಲಿವುಡ್‌ನ ಯಾವ ಸಿನೆಮಾಗಳೂ ತೆರೆ ಕಾಣುತ್ತಿಲ್ಲ. ಪ್ರಮುಖ ನಟರು, ನಿರ್ದೇಶಕರು, ನಿರ್ಮಾಪಕರು ಕೂಡ ನೇರವಾಗಿ ಒಟಿಟಿ ಪ್ಲಾಟ್‌ಫಾರಂ ಮೂಲಕವೇ ಸಿನೆಮಾ ಬಿಡುಗಡೆ ಮಾಡುತ್ತಿರುವ ಕಾರಣ, ಥಿಯೇಟರ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.