Advertisement

ಸರಣಿ ಕಳ್ಳತನ: ಆರೋಪಿಗಳ ಪತ್ತೆಗೆ ಪೊಲೀಸರ ಬಲೆ

11:57 AM Jan 12, 2019 | Team Udayavani |

ಮಾನ್ವಿ: ತಾಲೂಕಿನ ಜಾನೇಕಲ್‌ ಗ್ರಾಪಂ ವ್ಯಾಪ್ತಿಗೆ ಬರುವ ಗವಿಗಟ್ಟ, ಅಮರಾವತಿ, ಆಲ್ದಾಳ ಕ್ಯಾಂಪ್‌ನಲ್ಲಿ ಮನೆ, ಅಂಗಡಿಗಳಲ್ಲಿ ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಗವಿಗಟ್ಟ ಗ್ರಾಮದ ಶರಣಪ್ಪ ಅಂಗಡಿ ಶಿವರಾಜಪ್ಪ ಅವರ ಮನೆ ಬೀಗ ಮುರಿದು 8 ತೊಲೆ ಬಂಗಾರ ಮತ್ತು 1.60 ಲಕ್ಷ ರೂ. ನಗದು ಹಣ ದೋಚಿದ್ದಾರೆ.

Advertisement

ಇದೇ ಗ್ರಾಮದ ಕಿರಾಣಿ ಅಂಗಡಿ, ಶ್ರೀ ವೀರಭದ್ರೇಶ್ವರ ಮೆಡಿಕಲ್‌ ಸ್ಟೋರ್‌, ಶ್ರೀ ಸಿದ್ದರಾಮೇಶ್ವರ ಕ್ಯಾನ್ವಾಸಿಂಗ್‌ ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಇದೇ ದಿನ ತಡರಾತ್ರಿ ಅಮರಾವತಿ ಗ್ರಾಮದ ಮಲ್ಲನಗೌಡ ರುದ್ರಪ್ಪಗೌಡ ಮನೆ ಬೀಗ ಮುರಿದು 11 ತೊಲೆ ಬಂಗಾರ 5 ಲಕ್ಷ ರೂ. ನಗದು ಹಣ ಕಳ್ಳತನ ನಡೆದಿದೆ. ನಂತರ ಅಲ್ದಾಳ ಕ್ಯಾಂಪ್‌ನ ಶ್ರೀರಾಮ ದೇವಸ್ಥಾನ ಬೀಗ ಮುರಿದು 25 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಸಿಂಧನೂರು ಡಿವೈಎಸ್‌ಪಿ, ಮಾನ್ವಿ ಸಿಪಿಐ ಚಂದ್ರಶೇಖರ, ಪಿಎಸ್‌ಐ ರಂಗಪ್ಪ ಎಚ್. ದೊಡ್ಡಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪೊಲೀಸರಿಂದ ಆರೋಪಿಗಳ ಶೋಧ ಕಾರ್ಯ ನಡೆಸಲಾಗಿದೆ. ಈ ಮೂರು ಗ್ರಾಮಗಳಲ್ಲಿ ನಡೆದ ಸರಣಿ ಕಳ್ಳತನಗಳು ಒಂದೇ ಮಾದರಿಯಲ್ಲಿದ್ದು, ಒಂದೇ ತಂಡದಿಂದ ಕಳ್ಳತನ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಮಾನ್ವಿ ಸಿಪಿಐ, ಪಿಎಸ್‌ಐ ಹಾಗು ಕವಿತಾಳ ಪಿಎಸ್‌ಐ ನೇತೃತ್ವದಲ್ಲಿ ಈಗಾಗಲೇ ಮೂರು ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಸಿಂಧನೂರು ಡಿವೈಎಸ್‌ಪಿ ವಿಶ್ವನಾಥರಾವ್‌ ಕುಲಕರ್ಣಿ ಉದಯವಾಣಿಗೆ ತಿಳಿಸಿದ್ದಾರೆ.

ಗುರುವಾರ ತಡರಾತ್ರಿ ಮೂರು ಗ್ರಾಮಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ ಗ್ರಾಮಸ್ಥರಲ್ಲಿ ಅತಂಕ ಉಂಟು ಮಾಡಿದೆ. ಸರಣಿ ಕಳ್ಳತನಗಳು ಒಂದೇ ಮಾದರಿಯಲ್ಲಿ ನಡೆದಿದ್ದು, ಹೊರ ಜಿಲ್ಲೆ ಅಥವಾ ರಾಜ್ಯದಿಂದ ಬಂದ ಕಳ್ಳರ ತಂಡ ಕೃತ್ಯ ಎಸಗಿರಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next