Advertisement

ಸೆರೆನಾ 23ನೇ ಗ್ರ್ಯಾನ್‌ಸ್ಲಾಮ್‌ ಯಾನ

03:55 AM Jan 29, 2017 | Team Udayavani |

ಮೆಲ್ಬರ್ನ್: ಅಕ್ಕ-ತಂಗಿಯರ ಭಾವುಕ ಹೋರಾಟವೊಂದಕ್ಕೆ ಸಾಕ್ಷಿಯಾದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಶನಿವಾರದ ತೀವ್ರ ಕುತೂಹಲ ಹಾಗೂ ವಿಪರೀತ ನಿರೀಕ್ಷೆಯ ಫೈನಲ್‌ನಲ್ಲಿ ಅವರು ವೀನಸ್‌ ವಿಲಿಯಮ್ಸ್‌ ವಿರುದ್ಧ 6-4, 6-4 ಅಂತರದ ಗೆಲುವು ಒಲಿಸಿಕೊಂಡರು. ಇವರ ಆಟ ಗತಕಾಲದ ಟೆನಿಸ್‌ ವೈಭವವನ್ನು ತೆರೆದಿರಿಸಿತು. 

Advertisement

ಇದು ಸೆರೆನಾ ವಿಲಿಯಮ್ಸ್‌ ಪಾಲಾದ 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾದರೆ, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಒಲಿಸಿಕೊಂಡ 7ನೇ ಕಿರೀಟ. ಇದರೊಂದಿಗೆ ಸೆರೆನಾ 22 ಗ್ರ್ಯಾನ್‌ಸ್ಲಾಮ್‌ ಗೆದ್ದ ಸ್ಟೆಫಿ ಗ್ರಾಫ್ ದಾಖಲೆಯನ್ನು ಮುರಿದರು. ಇನ್ನೊಂದು ಗ್ರ್ಯಾನ್‌ಸ್ಲಾಮ್‌ ಗೆದ್ದರೆ ಆಸ್ಟ್ರೇಲಿಯದ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಗೆಲುವಿನ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ. ಆದರೆ ಕೋರ್ಟ್‌ ಅವರ ಅಭಿಯಾನದ ವೇಳೆ ಅಮೆಚೂರ್‌ ಹಾಗೂ ಪ್ರೊಫೆಶನಲ್‌ ಯುಗದ ಪ್ರಶಸ್ತಿಗಳೆರಡೂ ಒಳಗೊಂಡಿದ್ದವು.

ಸೆರೆನಾ ಮತ್ತೆ ನಂಬರ್‌ ವನ್‌
ಈ ಸಾಧನೆಯೊಂದಿಗೆ ಸೆರೆನಾ ವಿಲಿಯಮ್ಸ್‌ ಮರಳಿ ವಿಶ್ವದ ನಂಬರ್‌ ವನ್‌ ಆಟಗಾರ್ತಿಯಾಗಿ ಹೊರ ಹೊಮ್ಮಿದರು. ಸೋಮವಾರ ಇದು ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಕಳೆದ ಯುಎಸ್‌ ಓಪನ್‌ ಸೋಲಿನ ವೇಳೆ ಸೆರೆನಾ ಅಗ್ರಸ್ಥಾನದಿಂದ ಕೆಳಗಿಳಿದಿದ್ದರು. ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಮೊದಲ ಬಾರಿಗೆ ನಂಬರ್‌ ವನ್‌ ತಾರೆಯಾಗಿ ಮೂಡಿಬಂದಿದ್ದರು. 

2003ರ ಪುನರಾವರ್ತನೆ
2003ರಲ್ಲಿ ಇದೇ “ರಾಡ್‌ ಲೆವರ್‌ ಎರೆನಾ’ದಲ್ಲಿ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸುವ ಮೂಲಕವೇ ಸೆರೆನಾ ಮೊದಲ ಸಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದು ಮೆರೆದಾಡಿದ್ದರು. ಆದರೆ ಅಂದಿನದು 3 ಸೆಟ್‌ಗಳ ಜಿದ್ದಾಜಿದ್ದಿ ಕಾಳಗವಾಗಿತ್ತು. ಈ ಬಾರಿ ಆಕ್ರಮಣಕಾರಿ ನೆಟ್‌ ಗೇಮ್‌ ಹಾಗೂ ಎದುರಾಳಿಯ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ರಕ್ಷಣಾತ್ಮಕ ರೀತಿಯಲ್ಲಿ ಜವಾಬು ನೀಡುವ ಮೂಲಕ ಸೆರೆನಾ ಮೇಲುಗೈ ಸಾಧಿಸುತ್ತ ಹೋದರು. 

ನಿನ್ನ ಗೆಲುವು, ನನ್ನ ಗೆಲುವು!
“ಸೆರೆನಾ ನನ್ನ ಕಿರಿಯ ಸಹೋದರಿ. ಆಕೆಯ 23ನೇ ಗ್ರ್ಯಾನ್‌ಸ್ಲಾಮ್‌ ಗೆಲುವಿಗೆ ಅಭಿನಂದನೆಗಳು. ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಸೆರೆನಾ ನಿನಗೆ ಗೊತ್ತು… ನಿನ್ನ ಗೆಲುವು ಯಾವತ್ತೂ ನನ್ನ ಗೆಲುವು. ನೀನೆಂದರೆ ನನ್ನ ಪಾಲಿನ ಜಗತ್ತು…’ ಎಂದು ವೀನಸ್‌ ಚಾಂಪಿಯನ್‌ ಸೆರೆನಾರನ್ನು ಅಭಿನಂದಿಸಿದರು. 

Advertisement

“ಈ ಸಂದರ್ಭದಲ್ಲಿ ನಾನು ವೀನಸ್‌ಗೆ ಅಭಿನಂದನೆ ಸಲ್ಲಿಸಬಯಸುತ್ತೇನೆ. ಆಕೆ ಓರ್ವ ಅದ್ಭುತ ವ್ಯಕ್ತಿ, ಗ್ರೇಟ್‌ ಚಾಂಪಿಯನ್‌. ಅವಳಿಲ್ಲದೆ ನನ್ನ ಈ 23 ಪ್ರಶಸ್ತಿಗಳಿಲ್ಲ. ಆಕೆ ನನ್ನ ಪಾಲಿನ ಸ್ಫೂರ್ತಿ. ಹೀಗಾಗಿಯೇ ನಾನಿಂದು ಇಲ್ಲಿ ನಿಂತಿದ್ದೇನೆ. ನನ್ನನ್ನು ಓರ್ವ ಅತ್ಯುತ್ತಮ ಆಟಗಾರ್ತಿಯಾಗಿ ರೂಪಿಸಿದ ನಿನಗೆ ಕೃತಜ್ಞತೆಗಳು…’ ಎನ್ನುವ ಮೂಲಕ ವಿಜೇತ ಸೆರೆನಾ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದರು. ಇಬ್ಬರ ಒಟ್ಟು ವಯಸ್ಸಿನ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸೆಣಸಿದ ಅತ್ಯಂತ ಹಿರಿಯ ಜೋಡಿ ಎಂಬ ದಾಖಲೆಗೆ ವೀನಸ್‌-ಸೆರೆನಾ ಪಾತ್ರರಾಗಿದ್ದಾರೆ.

ಸ್ಟೆಫಿ ದಾಖಲೆ ಮುರಿದ ಸೆರೆನಾ
ಸೆರೆನಾ ವಿಲಿಯಮ್ಸ್‌ 23 ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ಆಧುನಿಕ ಟೆನಿಸ್‌ನಲ್ಲಿ (ಓಪನ್‌ ಎರಾ) ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಕಳೆದ ವರ್ಷ ಸೆರೆನಾ ವಿಂಬಲ್ಡನ್‌ ಕೂಟದಲ್ಲಿ ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು ಮಣಿಸಿ ಸ್ಟೆಫಿ ಅವರ 22 ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಸರಿದೂಗಿಸಿದ್ದರು.

ಸೆರೆನಾ ಆಧುನಿಕ ಟೆನಿಸ್‌ನ ವನಿತಾ ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ದಾಖಲೆ ನಿರ್ಮಿಸಿರುವುದೇನೋ ನಿಜ. ಆದರೆ ಸಾರ್ವಕಾಲಿಕ ಟೆನಿಸ್‌ನ ಗ್ರ್ಯಾನ್‌ಸ್ಲಾಮ್‌ನಲ್ಲಿ ವಿಶ್ವದಾಖಲೆ ನಿರ್ಮಿಸಲು ಇನ್ನೆರಡು ಗ್ರ್ಯಾನ್‌ ಸ್ಲಾಮ್‌ ಗೆಲುವಿನ ಅಗತ್ಯವಿದೆ. ಇನ್ನೊಂದು ಪ್ರಶಸ್ತಿ ಗೆದ್ದರೆ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿರುವ ಆಸ್ಟ್ರೇಲಿಯದ ಮಾರ್ಗರೇಟ್‌ ಕೋರ್ಟ್‌ ದಾಖಲೆಯನ್ನು ಸಮ ಗೊಳಿಸಲಿದ್ದಾರೆ.

ಸೆರೆನಾ: ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗಳು
ವರ್ಷ    ಫೈನಲಿಸ್ಟ್‌    ಅಂತರ
2003    ವೀನಸ್‌     7-6 (7-4), 3-6, 6-4
2005    ಶರಪೋವಾ    2-6, 6-3, 6-0
2007    ಶರಪೋವಾ    6-1, 6-2
2009    ದಿನಾರಾ ಸಫಿನಾ    6-0, 6-3
2010    ಜಸ್ಟಿನ್‌ ಹೆನಿನ್‌    6-4, 3-6, 6-2
2015    ಶರಪೋವಾ    6-3, 7-6 (7-5)
2017    ವೀನಸ್‌     6-4, 6-4

ವನಿತಾ ಗ್ರ್ಯಾನ್‌ಸ್ಲಾಮ್‌ ಸಾಧಕಿಯರು
 ಆಟಗಾರ್ತಿ    ಗೆಲುವು    ಆಸ್ಟ್ರೇಲಿಯ    ಫ್ರೆಂಚ್‌    ವಿಂಬಲ್ಡನ್‌    ಯುಎಸ್‌ 
1.  ಮಾರ್ಗರೇಟ್‌ ಕೋರ್ಟ್‌    24    11    5    3    5
2.  ಸೆರೆನಾ ವಿಲಿಯಮ್ಸ್‌    23    7    3    7    6
3.  ಸ್ಟೆಫಿ ಗ್ರಾಫ್    22    4    6    7    5
4.  ಹೆಲೆನ್‌ ವಿಲ್ಸ್‌ ಮೂಡಿ    19    0    4    8    7
5.  ಕ್ರಿಸ್‌ ಎವರ್ಟ್‌    18    2    7    3    6
6.  ಮಾರ್ಟಿನಾ ನವ್ರಾಟಿಲೋವಾ    18    3    2    9    4

Advertisement

Udayavani is now on Telegram. Click here to join our channel and stay updated with the latest news.

Next