ಕೋವಿಡ್ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳು ಮಾಡುತ್ತಿದ್ದ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ನೋಡಿರುತ್ತೀರಿ. ಈಗ ಇದೇ ನರ್ಸ್‌ಗಳ ಸೇವೆಯನ್ನು ಕುರಿತಾದ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಸೆಪ್ಟೆಂಬರ್ 13′.
ಕೋವಿಡ್ ಸಂಕಷ್ಟದ ಸಮಯದಲ್ಲಿ ನರ್ಸ್‌ಗಳು ಎದುರಿಸಿದ ಕಷ್ಟಗಳು, ಅವರ ತ್ಯಾಗ ಮತ್ತು ಸಾಧನೆಯ ಮೇಲೆ ಬೆಳಕು ಚೆಲ್ಲಲು ಹೊರಟಿರುವ “ಸೆಪ್ಟೆಂಬರ್ 13′ ಸಿನಿಮಾದ ಮೊದಲ ಪೋಸ್ಟರ್ ಅನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಜೊತೆಗೆ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ ಪ್ರಶಂಸೆಯ ಮಾತುಗಳನ್ನಾಡಿದರು.
“ರೂಬಿ ಫಿಲಂಸ್’ ಬ್ಯಾನರ್‌ನಲ್ಲಿ ತಯಾರಾಗಿರುವ “ಸೆಪ್ಟೆಂಬರ್ 13′ ಸಿನಿಮಾಕ್ಕೆ ಐವಾನ್ ನೆಗ್ಲಿ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಕರ್ನಾಟಕ ವಿಧಾನ ಸಭೆಯ ಮಾಜಿ ಸದಸ್ಯರು ಮತ್ತು ಸುಮಾರು ಮೂರು ದಶಕಗಳಿಂದ ನರ್ಸಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಐವಾನ್ ನೆಗ್ಲಿ, ನರ್ಸ್‌ಗಳ ವೃತ್ತಿ ಜೀವನವನ್ನು ಅತ್ಯಂತ ಹತ್ತಿರದಿಂದ ಬಲ್ಲವರು.
“ಕನ್ನಡದಲ್ಲಿ ಇಲ್ಲಿಯವರೆಗೆ ಬೇರೆ ಬೇರೆ ಕ್ಷೇತ್ರದಲ್ಲಿ ಕಷ್ಟಪಟ್ಟವರ, ಸಾಧನೆ ಮಾಡಿದವರ ನೂರಾರು ಸಿನಿಮಾಗಳು ಬಂದಿವೆ. ಆದರೆ ನರ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದವರ, ಸಾಧಕರ ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ಹಾಗಾಗಿ ನರ್ಸ್‌ಗಳ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಪರಿಚಯಿಸುವುದಕ್ಕಾಗಿ ಈ ಸಿನಿಮಾ ನಿರ್ಮಿಸಿದ್ದೇವೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಜೊತೆಗೊಂದು ಸಂದೇಶ ಇರುವಂಥ ಸಿನಿಮಾ ಇದಾಗಿದೆ’ ಎನ್ನುವುದು ನಿರ್ಮಾಪಕ ಐವಾನ್ ನೆಗ್ಲಿ ಮಾತು.
ಯುನೆಸ್ಕೋ ಸಂಬಂಧಿಸಿದಂತೆ ಹಲವು ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ ಅನುಭವವಿರುವ, ಡಾ. ರಾಜ ಬಾಲಕೃಷ್ಣನ್ “ಸೆಪ್ಟೆಂಬರ್ 13′ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. “ಸೆಪ್ಟೆಂಬರ್ 13′ ಚಿತ್ರದಲ್ಲಿ ಶ್ರೇಯಾ ರಿಧೀಬನ್, ಚಿಂತನ್ ರಾವ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಜೈ ಜಗದೀಶ್, ವಿನಯಾ ಪ್ರಸಾದ್, ಯಮುನಾ ಶ್ರೀನಿಧಿ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕಲಾವಿದರು “ಸೆಪ್ಟೆಂಬರ್ 13′ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಜಿ ಸಚಿವ ಯು. ಟಿ ಖಾದರ್ ಕೂಡ ಚಿತ್ರದಲ್ಲಿ ಶಾಸಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದು ವಿಶೇಷವೆಂದರೆ, “ಸೆಪ್ಟೆಂಬರ್ 13′ ಚಿತ್ರದ ಗೀತೆಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು ನರ್ಸ್‌ಗಳು ಹೆಜ್ಜೆಹಾಕಿ, ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಸದ್ಯ ತನ್ನ ಪೋಸ್ಟರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ “ಸೆಪ್ಟೆಂಬರ್ 13′ ಚಿತ್ರವನ್ನು ಶೀಘ್ರದಲ್ಲಿಯೇ ತೆರೆಮೇಲೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.