ಹೊಸದಿಲ್ಲಿ: ಅಬಕಾರಿ ನೀತಿ ಹಗರಣ ಸಂಬಂಧ ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ (ಆಪ್)ದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಖಲಿಸ್ಥಾನಿ ಗುಂಪುಗಳಿಂದ ಆಪ್ 133 ಕೋಟಿ ರೂ. ಹಣ ಪಡೆದಿದೆ ಎಂಬ ಹೊಸ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.
ಕೆನಡಾ ಮತ್ತು ಅಮೆರಿಕದ ದ್ವಿಪೌರತ್ವ ಪಡೆದಿರುವ ಭಾರತೀಯ ಮೂಲದ ಖಲಿಸ್ಥಾನಿ ಪ್ರತ್ಯೇಕತಾ ವಾದಿಗಳ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಈ ಮಾಹಿತಿಯನ್ನು ಬಹಿರಂಗ ಮಾಡಿರುವ ವೀಡಿಯೋ ಸದ್ದು ಮಾಡುತ್ತಿದೆ.
2014 ಮತ್ತು 2022ರ ಅವಧಿಯಲ್ಲಿ ಆಪ್‌ಗೆ ವಿವಿಧ ಖಲಿಸ್ಥಾನಿ ಗುಂಪುಗಳು ಒಟ್ಟು 133.54 ಕೋಟಿ ರೂ. ಹಣ ನೀಡಿವೆ. ಇದಕ್ಕೆ ಪ್ರತಿ ಯಾಗಿ 1993ರ ಹೊಸದಿಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದೇವೇಂದ್ರ ಪಾಲ್ ಸಿಂಗ್ ಭುಲ್ಲರ್‌ಎಂಬ ಉಗ್ರನ ಬಿಡುಗಡೆಯ ಭರವಸೆಯನ್ನು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ನೀಡಿದ್ದರು.
2014ರಲ್ಲಿ ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್‌ನ ಗುರುದ್ವಾರದಲ್ಲಿ ಖಲಿಸ್ಥಾನಿ ಪರ ಸಿಕ್ಖರು ಮತ್ತು ಅರವಿಂದ ಕೇಜ್ರಿವಾಲ್ ಮಧ್ಯೆ ಸಭೆ ನಡೆದಿತ್ತು. ಈ ವೇಳೆ ಕೇಜ್ರಿವಾಲ್ ಹಣಕ್ಕೆ ಬದಲಾಗಿ ಭುಲ್ಲರ್ ಬಿಡುಗಡೆಯ ಭರವಸೆ ನೀಡಿದ್ದರು ಎಂದು ಪನ್ನುನ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಇದೇ ಮೊದಲಲ್ಲ: ಆಪ್ ವಿರುದ್ಧ ಪನ್ನುನ್ ಆರೋಪ ಮಾಡುತ್ತಿರುವುದ ಇದೇ ಮೊದಲಲ್ಲ. ಅಮೆರಿಕ ಮತ್ತು ಕೆನಡಾದ ಖಲಿಸ್ಥಾನಿ ಬೆಂಬಲಿಗರಿಂದ ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ 50.04 ಕೋಟಿ ರೂ. (6 ಮಿಲಿಯನ್ ಡಾಲರ್) ಸ್ವೀಕರಿಸಿದ್ದಾರೆ ಎಂದು ಪನ್ನುನ್ ಜನವರಿ ತಿಂಗಳಲ್ಲಿ ಆರೋಪಿಸಿದ್ದ. ಅಲ್ಲದೆ ಫೆಬ್ರವರಿಯೊಳಗೆ ಖಲಿಸ್ಥಾನಿ ಗ್ರೂಪ್‌ಗ್ಳ ಸದಸ್ಯರನ್ನು ಬಿಡುಗಡೆ ಮಾಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದ.
ಏನಿದು ಪ್ರಕರಣ?
-2014 ಮತ್ತು 2022ರಲ್ಲಿ ಆಪ್‌ಗೆ 133 ಕೋ.ರೂ. ಕೊಟ್ಟ ಬಗ್ಗೆ ಪನ್ನುನ್ ಆರೋಪ.
-2014ರಲ್ಲಿ ನ್ಯೂಯಾರ್ಕ್‌ನಲ್ಲಿ ಕೇಜ್ರಿವಾಲ್, ಖಲಿಸ್ತಾನಿಗಳ ಜತೆ ನಡೆದಿದ್ದ ಸಭೆ ಎಂದು ಹೇಳಿಕೆ.
-ಹಣ ನೀಡಿಕೆಗೆ ಬದಲಾಗಿ ದಿಲ್ಲಿ ಬಾಂಬ್ ಸ್ಫೋಟದ ಆರೋಪಿ ಭುಲ್ಲರ್ ಬಿಡುಗಡೆಗೆ ವಾಗ್ಧಾನ.
-ಜಾಲತಾಣಗಳಲ್ಲಿ ಪನ್ನುನ್ ಹೇಳಿದ್ದಾನೆ ಎನ್ನಲಾಗಿರುವ ವೀಡಿಯೋ ವೈರಲ್.