Advertisement

ಪ್ರತ್ಯೇಕ ಹಸಿ-ಒಣ ಕಸ ಸಂಗ್ರಹಕ್ಕೆ ಚಾಲನೆ

11:42 AM Sep 16, 2020 | Suhan S |

ಬೆಂಗಳೂರು: ಮುಂದಿನ ಮೂರು ತಿಂಗಳ ಒಳಗಾಗಿ ಗೋವಿಂದರಾಜ ನಗರ ವಾರ್ಡ್‌ನಲ್ಲಿ ಬ್ಲಾಕ್‌ಸ್ಪಾಟ್‌ ಮುಕ್ತ ಹಾಗೂ ಶೇ.100 ಹಸಿ-ಒಣಕಸ ವಿಂಗಡಣೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದರು.

Advertisement

ನಗರದಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಇದೇ ಮೊದಲ ಬಾರಿಗೆ ಗೋವಿಂದರಾಜನಗರವಿಧಾನಸಭಾ ಕ್ಷೇತ್ರದ ಗೋವಿಂದರಾಜ ನಗರ ವಾರ್ಡ್‌ನಲ್ಲಿ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ಅವರು ಮಂಗಳವಾರ ಚಾಲನೆ ನೀಡಿದರು. ಈ ಮೂಲಕ ನಗರದಲ್ಲಿ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಮೊದಲ ಹೆಜ್ಜೆ ಇರಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಆಯುಕ್ತ, ಪ್ರತ್ಯೇಕ ಕಸ ಸಂಗ್ರಹದಿಂದ ಗೋವಿಂದರಾಜ ನಗರ ವಾರ್ಡ್‌ ಮಾದರಿ ವಾರ್ಡ್‌ ಆಗಲಿದೆ. ಮುಂದಿನ ಒಂದು ವಾರದೊಳಗೆ ಉಳಿದ 37 ವಾರ್ಡ್‌ಗಳಲ್ಲಿಯೂ ಪ್ರತ್ಯೇಕವಾಗಿ ಕಸ ಸಂಗ್ರಹ ಮಾಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ಮಾತನಾಡಿ, ಗೋವಿಂದರಾಜ ನಗರ ವಾರ್ಡ್‌ನಲ್ಲಿ12 ಬ್ಲಾಕ್‌ಗಳನ್ನು ಗುರುತು ಮಾಡಲಾಗಿದೆ. ಎಲ್ಲ ಬ್ಲಾಕ್‌ಗಳಿಂದಲೂ ಏಕಕಾಲಕ್ಕೆ ಹಸಿಕಸ ಸಂಗ್ರಹ ಮಾಡಲಾಗುತ್ತದೆ. ಒಣಕಸ ಸಂಗ್ರಹಕ್ಕೆ ಮೊದಲ ಹಂತದಲ್ಲಿ38 ವಾರ್ಡ್‌ಗಳಲ್ಲಿ ಒಣಕಸ ಸಂಗ್ರಹಕಾರರ ಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಹಸಿ ಮತ್ತು ವೈದ್ಯಕೀಯ (ನೈರ್ಮಲ್ಯ) ತ್ಯಾಜ್ಯವನ್ನು ಪ್ರತಿದಿನ ಹಾಗೂ ಒಣ ಕಸವನ್ನು ವಾರದಲ್ಲಿ ಎರಡು ದಿನ ಸಂಗ್ರಹ ಮಾಡಲಾಗುತ್ತದೆ. ಕಡ್ಡಾಯವಾಗಿ ಎಲ್ಲ ಕಾರ್ಮಿಕರು ಹಾಗೂ ಸಿಬ್ಬಂದಿ ಸಮವಸ್ತ್ರ ಹಾಗೂ ಸುರಕ್ಷತಾ ಸಾಧನ ಬಳಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಇನ್ನುಕಸವಿಂಗಡಣೆ ಹಾಗೂ ವಿಲೇವಾರಿ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಘನತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘನೆ ಹಾಗೂ ಕಸ ವಿಂಗಡಣೆ ಮಾಡದವರ ಮೇಲೆ ಪಾಲಿಕೆಯ ಕಿರಿಯ, ಹಿರಿಯ ಆರೋಗ್ಯ ಹಾಗೂ ಮಾರ್ಷಲ್‌ ಗಳು ದಂಡ ವಿಧಿಸಲಿದ್ದಾರೆ ಎಂದು ಹೇಳಿದರು.

Advertisement

ತಿಂಗಳಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪನೆ: ಪಾಲಿಕೆ ವ್ಯಾಪ್ತಿಯಲ್ಲಿನ 38 ವಾರ್ಡ್‌ಗಳಲ್ಲಿ ಹೊಸ ಯೋಜನೆ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಎಲ್ಲ ವಾಡ್‌ ಗಳಲ್ಲಿನ ಕಾಂಪ್ಯಾಕ್ಟರ್‌ ಹಾಗೂ ಆಟೋಗಳಿಗೆ ಜಿಪಿಎಸ್‌ ಅಳವಡಿಸಲಾಗುವುದು. ಇದರಿಂದ ಈ ವಾಹನಗಳು ಎಷ್ಟು ಟ್ರಿಪ್‌ (ಬಾರಿ) ಕಸ ಸಂಗ್ರಹ ಮಾಡಿದೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಇದರ ಮೇಲೆ ಕಣ್ಗಾವಲಿಗೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿಇನ್ನೊಂದು ತಿಂಗಳಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹೊಸ ಯೋಜನೆ ಯಿಂದ ಏನು ಅನುಕೂಲ: ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವ ಯೋಜನೆ ಕಳೆದ ಹಲವು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಚಾಲನೆ ದೊರೆತಿದೆ. ನಿರೀಕ್ಷೆಯಂತೆ ಎಲ್ಲ ವಾರ್ಡ್‌ಗಳಲ್ಲಿ ಈ ಯೋಜನೆ ಅನುಷ್ಟಾನವಾದರೆ, ನಗರದಲ್ಲಿ ಹಂತ- ಹಂತವಾಗಿ ಕಸ ಸಂಗ್ರಹ ಹಾಗೂ ವಿಲೇವಾರಿ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆ. ಇದರಿಂದ ನಗರದಲ್ಲಿ ಹಸಿಕಸ ಸಂಸ್ಕರಣೆ ಹೆಚ್ಚಾಗಲಿದ್ದು, ಭೂಭರ್ತಿಗೆ ಹೋಗುವ ಕಸದ ಪ್ರಮಾಣ ಕಡಿಮೆಯಾಗಲಿದೆ. ನಿಗದಿತ ಅವಧಿಯಲ್ಲಿ ಹಸಿ ಹಾಗೂ ಒಣಕಸ ಸಂಗ್ರಹವಾಗುವು ದರಿಂದ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಕಡಿಮೆಯಾಗಲಿದೆ. ಅಲ್ಲದೆ, ಮುಖ್ಯವಾಗಿ ಹೊಸ ಕಾಂಪ್ಯಾಕ್ಟರ್‌ಗಳಲ್ಲಿ ಕಸ ಹೊರಕ್ಕೆ ಚಲ್ಲದಂತೆ ಕವರಿಂಗ್‌ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿಕಸಹಾಗೂ ಲಿಚೇಟ್‌ (ಕಸದ ತ್ಯಾಜ್ಯ ನೀರು) ಹರಿದು ಸಾರ್ವಜನಿಕರು ಪರದಾಡುವ ಪರಿಸ್ಥಿತಿಗೆ ಮುಕ್ತಿ ಸಿಗಲಿದೆ.

 

ಪ್ರತ್ಯೇಕ ಹಸಿಕಸಯೋಜನೆಯ ವಿಶೇಷತೆ ಏನು? :

  • ಪ್ರತಿದಿನ ಹಸಿ ಮತ್ತು ವೈದ್ಯಕೀಯ ತ್ಯಾಜ್ಯ ಹಾಗೂ ಒಣ ಕಸ ವಾರದಲ್ಲಿ ಎರಡು ದಿನ ಸಂಗ್ರಹ.
  • ಕಸ ಪ್ರತ್ಯೇಕಿಸಲು ಎಲ್ಲ ಕಾಂಪ್ಯಾಕ್ಟರ್‌ಗಳಿಗೂ ಮುಚ್ಚಳ (ಕವರ್‌) ವ್ಯವಸ್ಥೆ
  • ಎಲ್ಲ ಕಾಂಪ್ಯಾಕ್ಟರ್‌ ಹಾಗೂ ಆಟೋಗಳಿಗೆ ಜಿಪಿಎಸ್‌
  • ಆಟೋ ಟಿಪ್ಪರ್‌ ಮೇಲೆ ಗುತ್ತಿಗೆದಾರರ ಮೊಬೈಲ್‌ ಸಂಖ್ಯೆ ಹಾಗೂ ಬ್ಲಾಕ್‌ ನಂ. ನಮೂದು.
  • ಯಾವ ವಾರ್ಡ್‌ ಹಾಗೂ ಯಾವ ಬ್ಲಾಕ್‌ಗೆ ಕಾಂಪ್ಯಾಕ್ಟರ್‌ ಮೀಸಲು ವಿವರ
  • ಕೇಂದ್ರ ಕಂಟ್ರೋಲ್‌ ರೂಮ್‌ನಿಂದ ನಿರ್ವಹಣೆ ಮಾಡಲು ನಿರ್ಧಾರ
Advertisement

Udayavani is now on Telegram. Click here to join our channel and stay updated with the latest news.

Next