ಬೆಂಗಳೂರು: ನಗರದಲ್ಲಿ ಎಲ್ಲ ಬಗೆಯ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ, ಇದೀಗ ಆಹಾರ ತ್ಯಾಜ್ಯ ಸಂಸ್ಕರಣೆಗಾಗಿಯೇ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 4,500ರಿಂದ 5 ಸಾವಿರ ಟನ್‌ವರೆಗೆ ಮಿಶ್ರ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ 3,500 ಟನ್‌ಗೂ ಹೆಚ್ಚಿನ ತ್ಯಾಜ್ಯ ಹಸಿ ತ್ಯಾಜ್ಯವಾಗಿದೆ. ಹೀಗೆ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುವ ವೇಳೆ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಬೇರ್ಪಡಿಸಿ ನೀಡುವಂತೆ ಸಾರ್ವಜ ನಿಕರಿಗೆ ಬಿಬಿಎಂಪಿ ತಿಳಿಸಿದೆ.
ಅಲ್ಲದೆ, ಈ ಹಿಂದಿನಿಂದಲೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಮಿಶ್ರ ತ್ಯಾಜ್ಯ ನೀಡುವ ಮನೆಯವರಿಂದ ತ್ಯಾಜ್ಯ ಸಂಗ್ರಹಿಸದಂತೆ ಗುತ್ತಿಗೆದಾರರಿಗೂ ತಿಳಿಸಲಾಗಿತ್ತು. ಹೀಗೆ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಲ್ಲಿ ಶೇ. 80 ಭಾಗ ಆಹಾರ ತ್ಯಾಜ್ಯವಾಗಿದ್ದು, ಅವುಗಳನ್ನು ಇದೀಗ ಪ್ರತ್ಯೇಕವಾಗಿ ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗಾಗಿ ಹಾಗೂ ಸಮರ್ಪಕವಾಗಿ ತ್ಯಾಜ್ಯ ಸಂಸ್ಕರಿಸಿ, ನಿರ್ವಹಣೆ ಮಾಡುವ ಸಲು ವಾಗಿ ರಾಜ್ಯ ಸರ್ಕಾರವು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸ್ಥಾಪಿಸಿದೆ.
ಈ ಸಂಸ್ಥೆಯು ಇದೀಗ ನಗರಾದ್ಯಂತ ತ್ಯಾಜ್ಯ ಸಂಗ್ರಹಿಸಿ ತ್ಯಾಜ್ಯ ಭೂಭರ್ತಿ ಕೇಂದ್ರ ಹಾಗೂ ಸಂಸ್ಕರಣಾ ಕೇಂದ್ರ ಗಳಲ್ಲಿ ವಿಲೇವಾರಿ ಮಾಡಲು ಹೊಸದಾಗಿ ಗುತ್ತಿಗೆದಾರರನ್ನು ನೇಮಿಸುತ್ತಿದೆ. ಅದಕ್ಕಾಗಿ 80ಕ್ಕೂ ಹೆಚ್ಚಿನ ಪ್ಯಾಕೇಜ್‌ನಲ್ಲಿ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಹೀಗೆ ಟೆಂಡರ್ ಪ್ರಕ್ರಿಯೆ ಮುಗಿದು ಹೊಸ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹಣೆ ಆರಂಭಿಸುವ ಸಂದರ್ಭದಲ್ಲಿ ಆಹಾರ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಸೂಚಿಸುವ ಕುರಿತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಚಿಂತನೆ ನಡೆಸಿದೆ.