ಬಳ್ಳಾರಿ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ, ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಗುಡುಗಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮುಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ.
ಬಜೆಟ್ ಬಳಿಕ ಉತ್ತರ ಕರ್ನಾಟಕದ ಎಲ್ಲಾ ಶಾಸಕರೊಂದಿಗೆ ಮಾತಾಡಿದ್ದೇನೆ. ಮಾತುಕತೆ ಮುಂದುವರಿದಿದೆ. ಅನ್ಯಾಯ ಮುಂದುವರಿದರೆ ತೆಲಂಗಾಣ ಮಾದರಿ ಹೋರಾಟ ಮಾಡಲು ಸಿದ್ದ .ಇದು ನಮ್ಮ ಸ್ಪಷ್ಟ ನಿಲುವು ಎಂದರು.
ಬಜೆಟ್‌ನಲ್ಲಿ ಉತ್ತರ ಕರ್ನಾಟಕ್ಕೆ ಭಾರೀ ಅನ್ಯಾಯ ಮಾಡಿದ್ದಾರೆ . ಈಗ ಕಣ್ಣೀರಿಟ್ಟು ನಾಟಕ ಮಾಡುತ್ತಿದ್ದಾರೆ.ನಿಜವಾಗಿಯೂ ಕಣ್ಣೀರಿಡಬೇಕಾಗಿದ್ದು ಉತ್ತಕರ್ನಾಟಕದ ಜನತೆ ಎಂದಿದ್ದಾರೆ.
ಸಿಎಂ ಎಚ್.ಡಿ.ಕುಮಾರಸ್ವಾಮಿ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಲಕ್ಷಾಂತರ ರೂಪಾಯಿ ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಅಧಿಕಾರಿಗಳು ಸೂಟ್‌ಕೇಸ್ ಹಿಡಿದುಕೊಂಡು ಸರದಿಯ ಸಾಲುಗಳಲ್ಲಿ ಸಿಎಂ ಮನೆಯ ಮುಂದೆ ನಿಲ್ಲುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಮಗೆ ರಾಜ್ಯ ವಿಭಜನೆ ಮಾಡಬೇಕೆಂಬ ಯಾವುದೇ ಉದ್ದೇಶವಿಲ್ಲ .ನಮ್ಮ ನಿಲುವು ಅಖಂಡ ಕರ್ನಾಟಕದ ಪರ ಇದೆ. ಆದರೆ ಸಿಎಂ ನಿಲುವು ರಾಜ್ಯ ವಿಭಜನೆ ಮಾಡಬೇಕು ಎಂಬಂತಿದೆ, ನಿರ್ಲಕ್ಷ್ಯವಾದರೆ ಪ್ರತ್ಯೇಕವಾಗುವುದು ಅನಿವಾರ್ಯವಾಗುತ್ತದೆ ಎಂದು ಶ್ರೀ ರಾಮುಲು ಅವರು ಹೇಳಿಕೆ ವಿವಾದಕ್ಕೆ ಗುರಿಯಾಗುವುದು ತಿಳಿದು ಸ್ಪಷ್ಟನೆ ನೀಡಿದ್ದಾರೆ.