ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಪಡೆ ರಚನೆಗೆ ಚಿಂತನೆ ನಡೆದಿದೆ ಎಂದು ಉಪ ಮುಖ್ಯಮಂತ್ರಿಗಳೂ ಆದ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿಎಸ್‌ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾನಗರದಲ್ಲಿ ಸಂಚಾರ ದಟ್ಟಣೆ, ಕಸ, ರಸ್ತೆಗುಂಡಿ, ಕೆರೆ ಒತ್ತುವರಿ ಸೇರಿದಂತೆ ಸಮಸ್ಯೆಗಳ ಆಗರವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆ ಸವಾಲಾಗಿದೆ. ಆ ಸವಾಲನ್ನು ನಾನು ಸ್ವೀಕರಿಸಿದ್ದು, ಸಮರ್ಥವಾಗಿ ಎದುರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಅಭಿವೃದ್ಧಿಗಾಗಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ “ಬೆಂಗಳೂರು ಅಜೆಂಡಾ ಟಾಸ್ಕ್ಫೋರ್ಸ್’ ರಚಿಸಿದ್ದರು. ಅದೇ ಮಾದರಿಯ ಕಾರ್ಯಪಡೆ ರಚಿಸುವ ಆಲೋಚನೆ ಇದೆ ಎಂದು ಹೇಳಿದರು.
“ಅಲ್ಲಿ ಮಾತಾಡಲ್ಲ; ಇಲ್ಲಿ ಮಾತಾಡ್ತಾರೆ’: ಸಿಂಗಪುರ, ಹಾಂಗ್‌ಕಾಂಗ್, ಅಮೆರಿಕಾದಲ್ಲೂ ಸಂಚಾರದಟ್ಟಣೆ ಕಿರಿಕಿರಿ ಇದೆ. ಅಲ್ಲಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ಇಲ್ಲಿ (ಬೆಂಗಳೂರಲ್ಲಿ) ಮಾತ್ರ ಅದೇ ಹೆಚ್ಚು ಚರ್ಚೆ ಆಗುತ್ತದೆ. ಕಿಟಕಿಯಿಂದ ರಸ್ತೆಗೆ ಕಸ ಹಾಕುತ್ತೇವೆ. ಆದರೆ, ರಸ್ತೆಗಳು ಕ್ಲೀನ್ ಆಗಿರಬೇಕು ಎಂದು ಬಯಸುತ್ತೇವೆ. ಅದೇನೇ ಇರಲಿ, ನಗರ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಭವಿಷ್ಯದಲ್ಲಿ ಗಂಭೀರ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಮಗ್ರ ಅಭಿವೃದ್ಧಿಗೆ ಉದ್ಯಮಿಗಳ ಸಹಕಾರವೂ ಬೇಕು. ಸರ್ಕಾರ ಕೂಡ ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಕೆ. ರವಿ, ಹಿರಿಯ ಉಪಾಧ್ಯಕ್ಷರಾದ ಸಿ.ಆರ್. ಜನಾರ್ದನ, ಸುಧಾಕರ್ ಎಸ್. ಶೆಟ್ಟಿ, ನಟಿ ಅಮೂಲ್ಯಾ ಜಗದೀಶ್, ಪದಾಧಿಕಾರಿಗಳಾದ ಎಂ.ಜಿ. ಬಾಲಕೃಷ್ಣ, ಅಭಿಷೇಕ್ ರಂಜನ್, ಐಐಎಂಬಿ ಪ್ರೊ.ಪಿ.ಡಿ. ಜೋಸ್ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ವಿವಿಧ ಕಂಪೆನಿಗಳಿಗೆ “ಸಿಎಸ್‌ಆರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.