ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡುವ ಕುರಿತು ಬುಧವಾರ ನಡೆಯುವ ಸಚಿವ ಸಂಪುಟದ ನಿರ್ಧಾರದ ಮೇಲೆ ಎರಡೂ ಬಣಗಳು ಮುಂದಿನ ಹೋರಾಟ ನಿರ್ಧರಿಸಲು ತೀರ್ಮಾನಿಸಿವೆ.
ಈಗಾಗಲೇ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ನೀಡಿರುವ ವದರಿಯನ್ನು ಒಪ್ಪಿಕೊಳ್ಳುವಂತೆ ಲಿಂಗಾಯತ ಪರ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ವಿರುದ್ಧವಾಗಿ ವೀರಶೈವ ಮಹಾಸಭೆ ವರದಿಯನ್ನು ಒಪ್ಪಿಕೊಳ್ಳದಂತೆ ಹಿರಿಯ ಸಚಿವರ ಮೂಲಕ ಒತ್ತಡ ಹೇರಲು, ಹಿರಿಯ ಸಚಿವರನ್ನು ಪ್ರತ್ಯೇಕವಾಗಿ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 14 ರ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿದ್ದರೆ, ಕಾನೂನು ಹೋರಾಟ ಆರಂಭಿಸುವ ಕುರಿತು ಲಿಂಗಾಯತ ಹೋರಾಟಗಾರರು ಚಿಂತನೆ ನಡೆಸಿದ್ದಾರೆ.
ಈ ನಡುವೆ ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ದೊರೆತರೆ, ವೀರಶೈವರಿಗೆ ಯಾವ ರೀತಿ ಅನ್ಯಾಯವಾಗುತ್ತದೆ. ಇದರಲ್ಲಿ ಹೇಗೆ ಧರ್ಮ ಒಡೆಯುತ್ತದೆ ಎಂದು ಪ್ರಶ್ನಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ್ ಹೊರಟ್ಟಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ರಂಭಾಪುರಿ ಸ್ವಾಮೀಜಿಗೆ ಪತ್ರ ಬರೆದು ತಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಈ ನಡುವೆ ಭಾನುವಾರ ಸಿದ್ದಗಂಗಾ ಮಠದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವೀರಶೈವ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಒಟ್ಟಿಗೆ ಸೇರಿ ಊಟ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮಾರ್ಚ್ 14 ರಂದು ರಾಜ್ಯ ಸರ್ಕಾರ ಲಿಂಗಾಯತ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ತಮ್ಮ ಮುಂದಿನ ರಾಜಕೀಯ ನಡೆ ನಿಂತಿದೆ ಎಂದು ಶಾಮನೂರು ಶಿವ ಶಂಕರಪ್ಪ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.