ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯ ಗುಪ್ತಚರ ದಳದ ಕಾರ್ಯವೈಖರಿ ಬಗ್ಗೆ ಆರೋಪಗಳು ಕೇಳಿಬರುತ್ತಿರುವ
ಹಿನ್ನೆಲೆ ಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಿ ಅವರಿಗೆ ವಿಶೇಷ ತರಬೇತಿ ನೀಡಲು ರಾಜ್ಯ
ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದಿದ್ದಾರೆ. ಈ ಸಂದರ್ಭದಲ್ಲೇ ರಾಜ್ಯ ಗುಪ್ತಚರ ದಳದಲ್ಲಿ ಬಹಳಷ್ಟು ಲೋಪದೋಷಗಳಿವೆ. ಇದನ್ನು ಸರಿಪಡಿಸಲು ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ತೆಗೆದುಕೊಂಡಿದ್ದೇವೆ ಎಂದರು. ಗುಪ್ತದಳ ವಿಭಾಗಕ್ಕೆಂದೇ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಲು ಆದೇಶಿಸಲಾಗಿದೆ.
ಅದರಂತೆ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆ ವಿಶೇಷವಾಗಿ ನಡೆಯುತ್ತಿದೆ. ನೇಮಕಗೊಂಡ ಸಿಬ್ಬಂದಿಗೆ ಅತ್ಯಾಧುನಿಕ ತರಬೇತಿ ನೀಡಿ ಸಮರ್ಥರನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು. ಗುಪ್ತಚರ ದಳಕ್ಕೆ ವರ್ಗಾವಣೆ ಎಂದರೆ ಅದೊಂದು ಶಿಕ್ಷೆ ಎಂಬ ಮಾತು ಇಲಾಖೆಯಲ್ಲಿದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಸಾಮಾನ್ಯ ಪೊಲೀಸ್ ವಿಭಾಗದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಕಾರಣಕ್ಕೆ ಪೊಲೀಸರನ್ನು ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡುವುದೂ ಇದೆ. ಈ ಸಮಸ್ಯೆ ತಪ್ಪಿಸಿ ಗುಪ್ತಚರ ವಿಭಾಗವನ್ನು ಶಕ್ತಿಯುತವಾಗಿ ರೂಪಿಸಲು ಪ್ರತ್ಯೇಕ ನೇಮಕಾತಿ ನಡೆಸಲಾಗುತ್ತಿದೆ. ಒಮ್ಮೆ ಗುಪ್ತಚರ ದಳಕ್ಕೆ ನೇಮಕಗೊಂಡರೆ ನಿವೃತ್ತಿವರೆಗೆ ಅಲ್ಲೇ ಕಾರ್ಯನಿರ್ವಹಿಸಬೇಕು ಎಂದರು.
ಮಾದಕ ಜಾಲ ಪತ್ತೆಗೆ ಸೂಚನೆ: ಮಾದಕ ವಸ್ತುಗಳ ಮಾರಾಟ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಾದಕ ವಸ್ತು ಮಾರಾಟಗಾರರನ್ನು ಬಂಧಿಸುವುದರ ಜತೆಗೆ ಅದು ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾದಕ ವಸ್ತುಗಳ ಮಾರಾಟದ ಮೂಲಬೇರು ಪತ್ತೆ ಹಚ್ಚಿ ಕಡಿವಾಣ ಹಾಕುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ 2016ಕ್ಕೆ ಹೋಲಿಸಿದರೆ 2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ರಾಜ್ಯದಲ್ಲಿ ಶೇ.1ರಷ್ಟು, ರಾಷ್ಟ್ರೀಯ ಮಟ್ಟದಲ್ಲಿ ಶೇ.6ರಷ್ಟು ಕಡಿಮೆಯಾಗಿದೆ. ಇನ್ನೂ ಗಣನೀಯವಾಗಿ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲ ಮಣಿ ಎನ್.ರಾಜು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ, ಮುಖ್ಯಮಂತ್ರಿಯರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಹಿರಿಯ ಮತ್ತು ಕಿರಿಯ ಐಪಿಎಸ್ ಅಧಿಕಾರಿಗಳು ಇದ್ದರು
32 ಸಾವಿರ ಹುದ್ದೆಗಳ ಭರ್ತಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಸದ್ಯ ಖಾಲಿ ಇರುವ 42 ಸಾವಿರ ಹುದ್ದೆಗಳ ಪೈಕಿ 32 ಸಾವಿರ ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. 2,272 ಕೋಟಿ ರೂ.ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ 12 ಸಾವಿರ ಮಂದಿಗೆ ಏಕ ಕಾಲದಲ್ಲಿ ಬಡ್ತಿ ನೀಡಲಾಗಿದೆ. ಇಂತಹ ಕಾರ್ಯ ಈ ಹಿಂದೆ ನಡೆದಿರಲಿಲ್ಲ. ಪೊಲೀಸರು, ವೈದ್ಯರು ಹಾಗೂ ಶಿಕ್ಷಕರ ನೇಮಕ ವಿಚಾರದಲ್ಲಿ ಆರ್ಥಿಕ ಮಿತಿ ನಿರ್ಬಂಧ ಹೇರದಂತೆ ಸೂಚನೆಯನ್ನು ಕೂಡ ಕೊಟ್ಟಿದ್ದೇನೆ ಎಂದು ಇದೇ ವೇಳೆ ಸಿಎಂ ಹೇಳಿದರು.
ಇತ್ತೀಚೆಗೆ ಭೂಗತ ಪಾತಕಿ ರವಿಪೂಜಾರಿ ಹೆಸರಿನಲ್ಲಿ ಉದ್ಯಮಿಗಳು, ಶಾಸಕರು ಹಾಗೂ ಸಚಿವರಿಗೆ ಬರುತ್ತಿರುವ ಕರೆಗಳ ಕುರಿತು ತನಿಖೆ ನಡೆಸಲು ಸೂಚಿಸಲಾಗಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಬೆದರಿಕೆ ಕರೆ ಮಾಡುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ