Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತ್ಯೇಕ ಪ್ರತಿಭಟನೆ

11:17 AM Sep 09, 2018 | |

ಮೈಸೂರು: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಶನಿವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದವು.
ಶುದ್ಧ ಕುಡಿಯುವ ನೀರಿನಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮಾನಸಗಂಗೋತ್ರಿ ವಿದ್ಯಾರ್ಥಿನಿಲಯದ ನಿಲಯಾರ್ಥಿಗಳು ಶನಿವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ವಿವಿ ವಿರುದ್ಧ ಘೋಷಣೆ: ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆಯ ಬಳಿ ಜಮಾಯಿಸಿದ ನಿಲಯಾರ್ಥಿಗಳು, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವತ್ಛತೆಯಿಲ್ಲ: ಮೈಸೂರು ವಿವಿಯ ವಿದ್ಯಾರ್ಥಿನಿಲಯಗಳ ಶೌಚ ಗೃಹಗಳು ಹಾಳಾಗಿವೆ. ಬಟ್ಟೆ ಒಗೆಯುವ ಜಾಗದಲ್ಲಿ ಪಾಚಿ-ಗಿಡಗಂಟಿಗಳು ಬೆಳೆದಿವೆ. ಕಸ ಸಂಗ್ರಹಣೆ, ವಿಂಗಡಣೆಗೆ ಯಾವುದೇ ವೈಜ್ಞಾನಿಕ ವಿಧಾನ ಅನುಸರಿಸುತ್ತಿಲ್ಲ. ಇಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲದೆ, ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ ಎಂದು ದೂರಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ಸ್ಥಾಪಿಸಬೇಕು. ಸೊಳ್ಳೆಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಕೋಣೆಗಳಲ್ಲಿ ತಿಗಣೆ ಸಮಸ್ಯೆ ಇದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಊಟದ ಹಾಲ್‌ನಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ ಫ‌ಲಕ ಹಾಕಬೇಕು. ಪಾರ್ಕಿಂಗ್‌ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು.  ಸ್ವತ್ಛತಾ ಪರಿಕರಗಳನ್ನು ಹೆಚ್ಚಿನ ಮಟ್ಟದಲ್ಲಿ ಪೂರೈಸಬೇಕು. ತಿಂಗಳಿಗೊಮ್ಮೆಯಾದರೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಬೇಕು. ಹಾಸ್ಟೆಲ್‌ನಲ್ಲಿರುವ ಜಿಮ್‌ ಪ್ರತಿದಿನ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಚೇತನ್‌, ಕೆ.ಎಂ.ಸುರೇಶ್‌, ಬಸವಣ್ಣ, ಮೋಹಿತ್‌, ನಾಗೇಂದ್ರ, ಗೋವಿಂದರಾಜು, ಚೇತನ್‌, ರಾಜ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್‌ ಪ್ರತಿಭಟನೆ: ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ನ್ಯಾಯಾಲಯ ಮುಂಭಾಗದ‌ ಗಾಂಧಿ ಪುತ್ಥಳಿ ಬಳಿ ಸೇರಿದ ಪ್ರತಿಭಟನಾಕಾರರು, ತಳ್ಳುಗಾಡಿಯ ಮೇಲೆ ಬೈಕ್‌ ನಿಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

Advertisement

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಗತ್ಯ ವಸ್ತುಗಳಾದ ಪೆಟ್ರೋಲ್‌, ಡಿಸೇಲ್‌,  ಅಡುಗೆ ಅನಿಲ ದರ ಏರುತ್ತಲೇ ಸಾಗಿದೆ. ಇದರಿಂದಾಗಿ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಕೂಡಲೇ ತೈಲ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಮೋಸಿನ್‌ ಖಾನ್‌, ನಗರ ಉಪಾಧ್ಯಕ್ಷರಾದ ರಾಘವೇಂದ್ರ, ರಾಜರಾಜೇಂದ್ರ, ಪದಾಧಿಕಾರಿಗಳಾದ ಸ್ವಾಮಿ, ಮಂಜು, ಲೋಕೇಶ್‌, ಪ್ರವೀಣ್‌, ಗಿರೀಶ್‌, ಹರೀಶ್‌ ಇತರರು ಹಾಜರಿದ್ದರು.

7ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ: ದಿನಗೂಲಿ ಮಹಿಳಾ ಪೌರಕಾರ್ಮಿಕರನ್ನು ವಜಾಗೊಳಿಸಿ ಹೊರಗುತ್ತಿಗೆ ನೀಡುವ ಮೈಸೂರು ವಿಶ್ವವಿದ್ಯಾಲಯದ ಕ್ರಮ ಖಂಡಿಸಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಮಾನಸಗಂಗೋತ್ರಿಯ ಮುಖ್ಯದ್ವಾರದಲ್ಲಿರುವ ಕುವೆಂಪು ಪ್ರತಿಮೆ ಮುಂದೆ ಪ್ರತಿಭಟನೆ ಮುಂದುವರಿಸಿರುವ ಪೌರಕಾರ್ಮಿಕ ಮಹಿಳೆಯರು ಶನಿವಾರವೂ ಪ್ರತಿಭಟನೆ ನಡೆಸಿದರು.

 ವಿಶ್ವ ವಿದ್ಯಾನಿಲಯದಲ್ಲಿ 14 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೂರಾರು ಮಹಿಳಾ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ವಿವಿ ಮುಂದಾಗಿರುವುದು ಖಂಡನೀಯ. ಸ್ವತ್ಛತಾ ಕೆಲಸ ಮಾಡುವ ನಮಗೆ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಇಎಸ್‌ಐ, ಪಿಎಫ್ ಸೌಲಭ್ಯ ಕೂಡ ನೀಡುತ್ತಿಲ್ಲ. ವೇತನ ತಾರತಮ್ಯ ಮಾಡದೆ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next