ಸದ್ಯಕ್ಕೆ ಕರ್ನಾಟಕದಲ್ಲಿ ಥಿಯೇಟರ್‌ಗಳು, ಮಲ್ಟಿಫ್ಲೆಕ್ಸ್ ಎಲ್ಲವೂ ಬಂದ್ ಆಗಿರುವುದರಿಂದ, ಕನ್ನಡ ಸಿನಿಮಾಗಳನ್ನು ನೋಡಬೇಕೆನ್ನುವ ಪ್ರೇಕ್ಷಕರಿಗೆ ಇರುವ ವೇದಿಕೆಗಳೆಂದರೆ, ಟಿ.ವಿ ಮತ್ತು ಓಟಿಟಿ ಫ್ಲಾಟ್‌ಫಾರ್ಮ್ಗಳು ಮಾತ್ರ.
ಇನ್ನು ಇದೇ ಅವಕಾಶವನ್ನು ಬಳಸಿಕೊಂಡ ಕೆಲವು ಟಿ.ವಿ ಚಾನೆಲ್‌ಗಳು, ತಾವು ಪಡೆದುಕೊಂಡ ಸಿನಿಮಾಗಳ ಟಿ.ವಿ ರೈಟ್ಸ್ ನಲ್ಲಿ ಆ ಸಿನಿಮಾಗಳನ್ನು ಟಿ.ವಿ ಯಲ್ಲಿ ಪ್ರಸಾರ ಮಾಡುವುದರ ಜೊತೆಗೆ, ಅವುಗಳನ್ನು ತಮ್ಮದೇಯಾದ ಓಟಿಟಿ ಫ್ಲಾಟ್‌ಫಾರ್ಮ್ ನಲ್ಲೂ ಪ್ರದರ್ಶನ ಮಾಡುತ್ತಿವೆ. ಹೀಗೆ ಮಾಡುತ್ತಿರುವು ದರಿಂದ, ಸಿನಿಮಾಗಳ ಪ್ರದರ್ಶನಕ್ಕೆ ಎರಡು ವೇದಿಕೆಗಳು ಸಿಕ್ಕರೂ, ಇದರಿಂದ ನಿರ್ಮಾಪಕರಿಗೆ ಎಳ್ಳಷ್ಟು ಪ್ರಯೋಜನವಾಗುತ್ತಿಲ್ಲ. ಈಗ ಇದೇ ವಿಷಯ ಕನ್ನಡದ ಅನೇಕ ನಿರ್ಮಾಪಕರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಟಿ.ವಿಯಲ್ಲಿ ಸಿನಿಮಾಗಳ ಟಿ.ವಿ ರೈಟ್ಸ್ ಪಡೆದುಕೊಂಡ ಚಾನೆಲ್‌ಗಳು ಅವುಗಳನ್ನು ಕೇವಲ ಟಿ.ವಿಯಲ್ಲಿ ಮಾತ್ರ ಪ್ರದರ್ಶಿಸುವ ಹಕ್ಕನ್ನು ಹೊಂದಿರುತ್ತವೆ. ಆದರೆ ಕೆಲವು ಚಾನೆಲ್‌ಗಳು ಟಿವಿ ರೈಟ್ಸ್ ಪಡೆದುಕೊಂಡು ಅವುಗಳನ್ನು ನಿಯಮಬಾಹಿರವಾಗಿ ತಮ್ಮ ಓಟಿಟಿ ಫ್ಲಾಟ್‌ಫಾರ್ಮ್ಗಳಲ್ಲೂ ಬಿಡುಗಡೆ ಮಾಡುತ್ತಿವೆ. ಇದರಿಂದ ಅಂತಹ ಸಿನಿಮಾಗಳ ನಿರ್ಮಾಪಕರಿಗೆ ಮೋಸವಾಗುತ್ತಿದೆ ಎನ್ನುವುದು ನಿರ್ಮಾಪಕರ ಅಳಲು. ಈ ಬಗ್ಗೆ ಈಗಾಗಲೇ ಅನೇಕ ನಿರ್ಮಾಪಕರು, ನಿರ್ದೇಶಕರು ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೆ ದೂರು ನೀಡುತ್ತಿದ್ದಾರೆ. ಇಲ್ಲಿಯವರೆಗೆ ಹೀಗೆ ಓಟಿಟಿಯಲ್ಲಿ ಪ್ರದರ್ಶನವಾಗುತ್ತಿದ್ದ ಸುಮಾರು 480ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನಕ್ಕೆ ಈಗಾಗಲೇ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎನ್ನುತ್ತಿವೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೂಲಗಳು. ಮೊದಲೇ ಕನ್ನಡದ ಚಿತ್ರ ನಿರ್ಮಾಪಕರು ತಾವು ಹೂಡಿದ ಬಂಡವಾಳವನ್ನು ಹೇಗೆ ಪಡೆಯುವುದು ಎನ್ನುವ ಚಿಂತೆಯಲ್ಲಿರುವಾಗಲೇ, ಓಟಿಟಿಯಲ್ಲಿ ಹೀಗೆ ಹಿಂಬಾಗಿಲ ಮೂಲಕ ಚಿತ್ರಗಳ ಪ್ರದರ್ಶನ ಮಾಡುವ ಕೆಲ ಚಾನೆಲ್‌ಗಳ ನಡೆ ನಿರ್ಮಾಪಕರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಸದ್ಯದ ಮಟ್ಟಿಗೆ ಕನ್ನಡ ಸಿನಿಮಾಗಳಿಗೆ ತನ್ನದೇ ಆದ ಓಟಿಟಿ ವ್ಯವಸ್ಥೆ ಇಲ್ಲದಿರುವುದರಿಂದ ಅನಿವಾರ್ಯವಾಗಿ ನಿರ್ಮಾಪಕರು ಬೇರೆ ಬೇರೆ ಓಟಿಟಿ ಫ್ಲಾಟ್‌ಫಾರ್ಮ್ಗಳತ್ತ ಮುಖ ಮಾಡಬೇಕಾಗಿದೆ. ಈ ಸನ್ನಿವೇಶವನ್ನು ಬಳಸಿಕೊಂಡು ಕೆಲ ಓಟಿಟಿ ಫ್ಲಾಟ್‌ಫಾರ್ಮ್ ಗಳು ನಿರ್ಮಾಪಕರಿಗೆ ವಂಚನೆ ಮಾಡುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನಿರ್ಮಾಪಕರ ಸಂಘದದಿಂದಲೇ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಪ್ರತ್ಯೇಕ ಓಟಿಟಿ ವ್ಯವಸ್ಥೆ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಮಾಪಕರ ಸಂಘ ಕಾರ್ಯಪ್ರವೃತ್ತವಾಗಲಿದೆ ಎಂದಿದ್ದಾರೆ. ಸಿನಿಮಾಗಳ ಟಿ.ವಿ ರೈಟ್ಸ್ ತೆಗೆದುಕೊಂಡವರು ಆ ಸಿನಿಮಾಗಳನ್ನು ಕೇವಲ ಟಿ.ವಿಯಲ್ಲಿ ಮಾತ್ರ ಪ್ರದರ್ಶಿಸ ಬೇಕು. ಆದರೆ ಕೆಲವು ಚಾನೆಲ್‌ಗಳು ಟಿ.ವಿ ರೈಟ್ಸ್ ತೆಗೆದುಕೊಂಡು ಅವುಗಳನ್ನು ತಮ್ಮ ಓಟಿಟಿ ಫ್ಲಾಟ್‌ಫಾರ್ಮ್ನಲ್ಲೂ ಪ್ರದರ್ಶಿಸುತ್ತಿವೆ. ಇದರಿಂದ ನಿರ್ಮಾಪಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರವೀಣ್ ಕುಮಾರ್ ದೂರಿದ್ದಾರೆ. ಅಲ್ಲದೆ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರ ಸಂಘ ಕಾನೂನು ಕ್ರಮಗಳಿಗೂ ಮುಂದಾಗಲಿದೆ. ಈ ಬಗ್ಗೆ ನಿರ್ಮಾಪಕರ ಸಂಘದಲ್ಲಿ ಗಂಭೀರ ಚರ್ಚೆಯಾಗುತ್ತಿದೆ ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.