Advertisement

ನಗರದಲ್ಲಿ ಪ್ರತ್ಯೇಕ ಸುಸಜ್ಜಿತ ಕಚೇರಿ ಶೀಘ್ರ ಕಾರ್ಯಾರಂಭ

07:39 PM Aug 03, 2017 | Team Udayavani |

ಮಹಾನಗರ: ಮಂಗಳೂರು ನಗರವನ್ನು ದೇಶದ ಮೊದಲ ‘ಸ್ಟಾರ್ಟ್ ಅಪ್‌’ ನಗರವನ್ನಾಗಿ ಪರಿವರ್ತಿಸುವ ಯೋಜನೆ ಒಂದೆಡೆಯಾದರೆ, ಬಂದರು ನಗರಿಯನ್ನು ‘ಸ್ಮಾರ್ಟ್‌ ಸಿಟಿ’ಯಾಗಿಸುವುದಕ್ಕೂ ಮತ್ತೂಂದೆಡೆ ಯೋಜನೆ ಸಿದ್ಧವಾಗಿದೆ. ಕೇಂದ್ರ ಸರಕಾರದ ಈ ಮಹತ್ವದ ಯೋಜನೆಗಳ ಸಮರ್ಪಕ ಜಾರಿಗೆ ಒಂದು ತಿಂಗಳಲ್ಲಿ ಎರಡೂ ಪ್ರತ್ಯೇಕ ಕಚೇರಿಗಳು ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಲಾಲ್‌ಬಾಗ್‌ನಲ್ಲಿರುವ ಪಾಲಿಕೆಯ ಮೂರನೇ ಮಹಡಿಯಲ್ಲಿ ಪ್ರಸ್ತುತ ಸ್ಮಾರ್ಟ್‌ಸಿಟಿ ಕಚೇರಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಬ್ಬರು ನಗರ ಯೋಜನಾಧಿಕಾರಿಗಳು, ಡಾಟಾ ಎಂಟ್ರಿ ಮಾಡುವವರು ಕೆಲಸ ಮಾಡುತ್ತಿದ್ದು, ಪೂರ್ಣ ಪ್ರಮಾಣದ ಕಚೇರಿಯನ್ನು ತೆರೆಯಲು ತೀರ್ಮಾನಿಸಲಾಗಿದೆ. ಒಂದು ತಿಂಗಳೊಳಗೆ ಹೊಸ ಕಚೇರಿ ಕಾರ್ಯಾರಂಭ ಮಾಡಲಿದೆ.

Advertisement

ಕಚೇರಿಯ ಸ್ಥಳಾವಕಾಶದ ಆಧಾರದ ಮೇಲೆ ಪಾಲಿಕೆಯ ವ್ಯಾಪ್ತಿಯಲ್ಲೇ ಇರಬೇಕೋ ಅಥವಾ ಬೇರೆಡೆಗೆ ಸ್ಥಳಾಂತರಿಸಬೇಕೋ ಎಂಬುದನ್ನು ಕೇಂದ್ರದ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ನಿರ್ಧರಿಸುವರು. ಈಗಾಗಲೇ ‘ವಿಶೇಷ ಉದ್ದೇಶ ವಾಹಕ’ದ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ರಚನೆಯಾಗಿದ್ದು, ಮೊದಲ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಶೀಘ್ರವೇ ಹೊಸದಿಲ್ಲಿಯಲ್ಲಿ ವಿಶೇಷ ಸಭೆಯೂ ನಡೆಯಲಿದೆ. ಸ್ಮಾರ್ಟ್‌ಸಿಟಿಯೊಳಗಿನ ಅಂಶಗಳ ಕುರಿತಂತೆ ಪ್ರಾರಂಭಿಕ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ವಿಸ್ತೃತ ಮಾತುಕತೆ ನಡೆಯುತ್ತಿದೆ.

ಪಾಲಿಕೆ ಸಲ್ಲಿಸಿರುವ ಎರಡು ಸಾವಿರ ಕೋಟಿ ರೂ. ಗಳ ಪ್ರಸ್ತಾವನೆಗೆ ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಒಪ್ಪಿಗೆ ನೀಡಿ ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಮಂಗಳೂರು ನಗರ, ಹಂಪನಕಟ್ಟೆ, ಬಂದರು ಹಾಗೂ ಕಾರ್‌ಸ್ಟ್ರೀಟ್‌ ವ್ಯಾಪ್ತಿಯ 1,628 ಎಕರೆ ಪ್ರದೇಶವನ್ನು ಇದರಲ್ಲಿ ಜೋಡಿಸಲಾಗಿದೆ.

ಸ್ಟಾರ್ಟ್‌ ಅಪ್‌ ಮತ್ತು ಇನ್‌ಕ್ಯುಬೇಶನ್‌ ಸೆಂಟರ್‌
ಮಂಗಳೂರಿನಲ್ಲಿ ಸ್ಟಾರ್ಟ್‌ ಅಪ್‌ ಮತ್ತು ಇನ್‌ಕ್ಯುಬೇಶನ್‌ ಸೆಂಟರ್‌ ಸ್ಥಾಪಿಸುವ ಕುರಿತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಜೂ.16ರಂದು ನಗರಕ್ಕೆ ಭೇಟಿ ನೀಡಿದ ಸಂದರ್ಭ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದರ ಪ್ರದೇಶಾಭಿವೃದ್ದಿ ಯೋಜನೆಯಡಿ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಇದರಂತೆ ಜೂ.23ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ, ಈಗಿನ ಅನುದಾನದ ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಒಟ್ಟೂ ಯೋಜನೆಯ ನಿರ್ವಹಣೆಗೆ ಸೊಸೈಟಿಯನ್ನು ಸ್ಥಾಪಿಸುವ ಯೋಜನೆಯಿದೆ.

ಕಟ್ಟಡದಲ್ಲಿ ಗುರುತು
ಸ್ಟಾರ್ಟ್‌ ಅಪ್‌ ಮತ್ತು ಇನ್‌ಕ್ಯುಬೇಶನ್‌ ಸೆಂಟರ್‌ಸ್ಥಾಪಿಸಲು ಅಗತ್ಯವಿರುವ ಐದು ಸಾವಿರ ಚ.ಅಡಿ ಸ್ಥಳವನ್ನು ಕದ್ರಿ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗುರುತಿಸಲಾಗಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಾಲಿಕೆ ಉಪಕಚೇರಿಯನ್ನು ವಲಯ ಕಚೇರಿಯನ್ನಾಗಿ ಮಾರ್ಪಡಿಸಿ ಪಾಲಿಕೆಯ ಕೇಂದ್ರ ವಿಭಾಗದ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ತೆರವಾದ ಸ್ಥಳದಲ್ಲಿ ಸೆಂಟರ್‌ ಆರಂಭಿಸುವ ಯೋಜನೆ ಇದೆ. ದ.ಕ. ಜಿಲ್ಲಾಧಿಕಾರಿ ಡಾ|ಕೆ.ಜಿ.ಜಗದೀಶ್‌ ಅವರು ಜಾಗ ನೀಡುವಂತೆ ಪಾಲಿಕೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಜು.31ರಂದು ನಡೆದ ಪಾಲಿಕೆ ಸಭೆಯಲ್ಲಿ 5 ವರ್ಷದವರೆಗೆ ಕದ್ರಿ ಕಚೇರಿಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿತ್ತು.

Advertisement

ಸ್ಟಾರ್ಟ್‌ ಅಪ್‌, ಇನ್‌ಕ್ಯುಬೇಶನ್‌ ಸೆಂಟರ್‌
ನವೋದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ‘ಸ್ಟಾರ್ಟ್‌ ಅಪ್‌-ಇನ್‌ಕ್ಯುಬೇಶನ್‌ ಸೆಂಟರ್‌’ ಮಂಗಳೂರಿನಲ್ಲಿ ಕೆಲವೇ ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಸುಮಾರು 1.30 ಕೋ.ರೂ. ವೆಚ್ಚದಲ್ಲಿ ತೆರೆಯಲಿರುವ ಈ ಕೇಂದ್ರ ದಲ್ಲಿ ಮೊದಲ ಹಂತದಲ್ಲಿ 60 ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಅವಕಾಶವಿದೆ. ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಅಗತ್ಯ ಮೂಲಸೌಕರ್ಯವನ್ನು ಈ ಕೇಂದ್ರ ಹೊಂದಿರಲಿದೆ. ಪ್ರತ್ಯೇಕ ಕ್ಯಾಬಿನ್‌, 4ಜಿ ಸ್ಪೀಡ್‌ನ‌ ಇಂಟರ್‌ನೆಟ್‌, 3ಡಿ ಪ್ರಿಂಟರ್‌, ವಿದ್ಯುತ್‌ ಸಹಿತವಾಗಿ ಕಂಪೆನಿಗಳು ಕೇಳುವ ಎಲ್ಲಾ ಮೂಲ ಸೌಕರ್ಯವನ್ನು ಈ ಕಚೇರಿ¿ಲ್ಲಿ ಒದಗಿಸಲಾಗುತ್ತದೆ. ನವೋದ್ಯಮಿಗಳಿಗೆ ಉದ್ಯಮ ಕ್ಷೇತ್ರದ ಮಾರ್ಗದರ್ಶನ, ಹಣಕಾಸಿನ ನೆರವು, ಸಮಸ್ಯೆಗಳಿಗೆ ಪರಿಹಾರ, ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ, ಮಾರ್ಕೆಟಿಂಗ್‌ ಕುರಿತ ಮಾಹಿತಿಯೂ ಈ ಕೇಂದ್ರ ಒದಗಿಸಲಿದೆ.

‘ತಿಂಗಳೊಳಗೆ ಸ್ಮಾರ್ಟ್‌ ಕಚೇರಿ’
ಸ್ಮಾರ್ಟ್‌ಸಿಟಿ ಯೋಜನೆಗೆ ಸುಸಜ್ಜಿತ ಕಚೇರಿ ನಡೆಸುವ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಈಗ ತಾತ್ಕಾಲಿಕವಾಗಿ ಪಾಲಿಕೆಯಲ್ಲೇ ಕಚೇರಿ ನಡೆಯುತ್ತಿದೆ. ಒಂದು ತಿಂಗಳೊಳಗೆ ಸುಸಜ್ಜಿತ ಕಚೇರಿ ಮಂಗಳೂರಿನಲ್ಲಿ ಕಾರ್ಯಾರಂಭವಾಗಲಿದೆ. ಈ ಕುರಿತ ಎಲ್ಲಾ ಸಿದ್ಧತೆಗಳು ನಡೆಸಲಾಗುತ್ತಿದೆ.
– ಮೊಹಮ್ಮದ್‌ ನಝೀರ್‌, ಮಹಾನಗರ ಪಾಲಿಕೆ ಆಯುಕ್ತರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next