ಬಾಗಲಕೋಟೆ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಮತ್ತೆ ಕೇಳಿ ಬಂದಿದ್ದು,ಮಂಗಳವಾರ ಮುಧೋಳದಲ್ಲಿ ಪ್ರತ್ಯೇಕ ಧ್ವಜಾರೋಹಣ ಮಾಡಿ, ಪ್ರತ್ಯೇಕ ರಾಜ್ಯಕ್ಕಾಗಿ ಘೋಷಣೆಗಳನ್ನು ಕೂಗಲಾಗಿದೆ.
ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಕಚೇರಿಯ ಎದುರು ಧ್ವಜಾರೋಹಣ ನೆರವೇರಿಸಲಾಗಿದ್ದು, ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೊಲ್ಲಹಟ್ಟಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕದ ಎಲ್ಲರೂ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಪ್ರತ್ಯೇಕ ರಾಜ್ಯವನ್ನು ಪಡೆಯಬೇಕಾಗಿದೆ ಎಂದರು.
ಕೇಸರಿ , ಹಳದಿ ಮತ್ತು ಹಸಿರು ಬಣ್ಣದ ಮಧ್ಯೆ 13 ಜಿಲ್ಲೆಗಳನ್ನು ಧ್ವಜದಲ್ಲಿ ನೀಲಿ ವರ್ಣದಲ್ಲಿ ಬಿಂಬಿಸಲಾಗಿದೆ.
ಪ್ರತ್ಯೇಕ ರಾಜ್ಯಕ್ಕಾಗಿ ಧ್ವಜಾರೋಹಣ ನಡೆಸಿದ್ದಕ್ಕೆ ಕೆಲ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.