Advertisement

ಉದ್ಯಮಿಗಳಿಗೇ ಪ್ರತ್ಯೇಕ ನೋಡಲ್‌ ಅಧಿಕಾರಿ

11:14 AM Oct 27, 2018 | Team Udayavani |

ಬೆಂಗಳೂರು: ಉದ್ಯಮಿಗಳ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಸ್ವೀಕರಿಸಿ ಪರಿಹಾರ ಕಲ್ಪಿಸಲು ಪ್ರತ್ಯೇಕ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ)ಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

Advertisement

ಉದ್ಯಮಿಗಳು ಇಂದು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಎಲ್ಲದಕ್ಕೂ ಒಂದೇ ದಿನ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ಆದ್ದರಿಂದ ಆದ್ಯತೆ ಮೇರೆಗೆ ಈಡೇರಬೇಕಿರುವ ಬೇಡಿಕೆಗಳ ಪಟ್ಟಿ ಮಾಡಿ, ಸರ್ಕಾರಕ್ಕೆ ಸಲ್ಲಿಸಬೇಕು. ಈ ಸಂಬಂಧ ಎಫ್ಕೆಸಿಸಿಐನಲ್ಲೇ ಒಂದು ಸಮಿತಿ ರಚಿಸಬೇಕು. ಆ ಸಮಿತಿ ಸೂಚಿಸುವ ಅಂಶಗಳನ್ನು ಅನುಷ್ಠಾನಗೊಳಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಹೇಳಿದರು.

ಅಲ್ಲದೆ, ಪ್ರದೇಶ ಅಥವಾ ಜಿಲ್ಲಾ ಮಟ್ಟದಲ್ಲಿ ಅಹವಾಲುಗಳನ್ನು ಸ್ವೀಕರಿಸಲು ಕೈಗಾರಿಕಾ ಅದಾಲತ್‌ ಕೂಡ ನಡೆಸಲಾಗುವುದು. ಇದರಿಂದ ಉದ್ಯಮಿಗಳಿಗೆ ಅನುಕೂಲ ಆಗಲಿದೆ ಎಂದ ಅವರು, ಸರ್ಕಾರ ನಿಮ್ಮೊಂದಿಗೆ (ಉದ್ಯಮಿಗಳೊಂದಿಗೆ) ಇದೆ. ನೀವೂ ಇದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು. 

ಎಚ್‌ಟಿ ವಿದ್ಯುತ್‌ ಸಂಪರ್ಕಕ್ಕೆ ಓಸಿ ಕಡ್ಡಾಯ!: ಇದಕ್ಕೂ ಮುನ್ನ ಸಂವಾದದಲ್ಲಿ ಎಫ್ಕೆಸಿಸಿಐ ಸದಸ್ಯ ಪ್ರಭಾಕರ್‌ ಮಾತನಾಡಿ, “ಯಾವುದೇ ಕೈಗಾರಿಕೆಗಳು ವಿದ್ಯುತ್‌ ಸಂಪರ್ಕಕ್ಕಾಗಿ ಆ ಕಟ್ಟಡದ ಮಾಲಿಕತ್ವ ದಾಖಲೆ ಅಥವಾ ಪಾಲುದಾರಿಕೆ ಪತ್ರ ಹೊಂದಿದ್ದರೆ ಸಾಕು ಎಂದು ಕೇಂದ್ರದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಸ್ಪಷ್ಟವಾಗಿ ಹೇಳುತ್ತದೆ.

ಆದರೆ, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸುವ ನಿಯಮ ಜಾರಿಗೆ ಮುಂದಾಗಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಅ.31 ಕೊನೆಯ ದಿನ. ಹಾಗೊಂದು ವೇಳೆ ಈ ಸಂಬಂಧ ಆದೇಶ ಹೊರಡಿಸಿದರೆ, ಕೈಗಾರಿಕೆಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ ಎಂದು ಸಚಿವರ ಗಮನಸೆಳೆದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್‌, ಈ ಕುರಿತು ಶೀಘ್ರ ಕೆಇಆರ್‌ಸಿ ಅಧ್ಯಕ್ಷ ಶಂಕರಲಿಂಗೇಗೌಡ ಮತ್ತು ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಜತೆ ಚರ್ಚಿಸಲಾಗುವುದು. ಅಲ್ಲದೆ ಈ ಮಧ್ಯೆ ಎಫ್ಕೆಸಿಸಿಐಯಿಂದಲೂ ಆಯೋಗಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದರು. 

ಮತ್ತೂಬ್ಬ ಸದಸ್ಯರು, ಕೈಗಾರಿಕೆಗಳಿಗೆ ಪೂರೈಕೆಯಾಗುವ ನೀರಿನ ಶುಲ್ಕವನ್ನು ನೂರಾರು ಪಟ್ಟು ಹೆಚ್ಚಿಸಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ. ಶೀಘ್ರ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದರು. 

ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್‌ ಇಲ್ಲದ ದೇಶಗಳೇ ಇಲ್ಲ. ಆದರೆ, ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧದಿಂದ ಸಣ್ಣ-ಪುಟ್ಟ ಅಂಗಡಿಗಳು ಸತ್ತುಹೋಗುತ್ತಿವೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಕೆಐಎಡಿಬಿ ಮಂಜೂರು ಮಾಡಿದ ಭೂಮಿಯ ಸ್ವಾಧೀನಕ್ಕೆ ಸ್ಥಳೀಯರಿಂದ ಸಾಕಷ್ಟು ವಿರೋಧ ಎದುರಿಸಬೇಕಾಗಿದೆ. ಟ್ರಕ್‌ ಟರ್ಮಿನಲ್‌ಗ‌ಳಿಲ್ಲದೆ ಸಮಸ್ಯೆ ಎದುರಾಗಿದೆ ಎಂದು ಅಹವಾಲು ಸಲ್ಲಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next