Advertisement

ಪ್ರತ್ಯೇಕ ಪ್ರಕರಣ: ಪರಿಚಿತರಿಂದಲೇ ಇಬ್ಬರ ಕೊಲೆ

12:36 AM Apr 04, 2019 | Lakshmi GovindaRaju |

ಬೆಂಗಳೂರು: ಮನೆಗಳವು, ಡಕಾಯಿತಿ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾದ ಘಟನೆ ರಾಜಗೋಪಾಲನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಅನ್ನಪೂರ್ಣೇಶ್ವರಿನಗರದ 2ನೇ ಮುಖ್ಯರಸ್ತೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ಹೆಗ್ಗನಹಳ್ಳಿ ನಿವಾಸಿ ವಿನೋದ ಅಲಿಯಾಸ್‌ ನರಸಿಂಹಮೂರ್ತಿ ಅಲಿಯಾಸ್‌ ಚೌಕಿ ನರಸಿಂಹ (25) ಕೊಲೆಯಾದವ. ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ನಂದಿನಿ ಲೇಔಟ್‌ನ ಬಾರ್‌ ಒಂದರಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ನರಸಿಂಹ, ಅನ್ನಪೂರ್ಣೇಶ್ವರಿನಗರದ 2ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ.

ಇದೇ ವೇಳೆ ಮೂರು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ನರಸಿಂಹನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಆತನ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದರು.

ರಸ್ತೆ ಬದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನರಸಿಂಹನನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ರಾಜಗೋಪಾಲನಗರ ಠಾಣೆ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪರಿಚಯಸ್ಥರೇ ಕೊಲೆ ಮಾಡಿರುವ ಬಗ್ಗೆ ಸುಳಿವು ದೊರಕಿದೆ. ನರಸಿಂಹನ ವಿರುದ್ಧ 2018ರಲ್ಲಿ ರಾಜಗೋಪಾಲನಗರ ಸೇರಿ ಕೆಲ ಪೊಲೀಸ್‌ ಠಾಣೆಗಳಲ್ಲಿ ಡಕಾಯಿತಿ ಯತ್ನ ಪ್ರಕರಣ ದಾಖಲಾಗಿದೆ. ಜತೆಗೆ ನೆರೆ ಜಿಲ್ಲೆಗಳಲ್ಲೂ ಆತನ ವಿರುದ್ಧ ಕಳವು, ಡರೋಡೆ ಪ್ರಕರಣಗಳು ದಾಖಲಾಗಿರುವ ಮಾಹಿತಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬೈಕ್‌ ವಾಪಸ್‌ ಕೊಡದಿದ್ದಕ್ಕೆ ಕೊಲೆ: ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿರುವ ನರಸಿಂಹ ಆಗಾಗ ಪರಿಚಿತರು ಹಾಗೂ ಸ್ನೇಹಿತರ ಬೈಕ್‌ ಕೊಂಡೊಯ್ಯುತ್ತಿದ್ದ. ಆದರೆ, ಹೇಳಿದ ಸಮಯಕ್ಕೆ ವಾಪಸ್‌ ನೀಡುತ್ತಿರಲಿಲ್ಲ. ಆ ಬೈಕ್‌ಗಳಲ್ಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ. ಇದೇ ವಿಚಾರಕ್ಕೆ ಸ್ನೇಹಿತರು ಹಾಗೂ ನರಸಿಂಹನ ನಡುವೆ ಗಲಾಟೆ ನಡೆಯುತ್ತಿತ್ತು.

ಇದೇ ಕಾರಣಕ್ಕೆ ಮಂಗಳವಾರ ರಾತ್ರಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದರು.

ಚಿಲ್ಲರೆ ವಿಚಾರಕ್ಕೆ ಸ್ನೇಹಿತನ ಕೊಲೆ: ಮತ್ತೂಂದು ಪ್ರಕರಣದಲ್ಲಿ ಮದ್ಯ ಖರೀದಿಸಿ ಬಳಿಕ ಬಾಕಿ ಉಳಿದ ಚಿಲ್ಲರೆ ವಿಷಯಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ರಾಮಚಂದ್ರಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರಾಮಚಂದ್ರಪುರ ನಿವಾಸಿ ದೇವಿಪ್ರಸಾದ್‌ ಅಲಿಯಾಸ್‌ ಪ್ರತಾಪ್‌ (36) ಕೊಲೆಯಾದವ. ಘಟನೆ ಸಂಬಂಧ ಪ್ರತಾಪ್‌ ಸ್ನೇಹಿತ ಶ್ರೀನಿವಾಸಮೂರ್ತಿ ಅಲಿಯಾಸ್‌ ಚಿನ್ನು (32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಾರ್‌ಬೆಂಡಿಂಗ್‌ ಕೆಲಸ ಮಾಡುತ್ತಿದ್ದ ಪ್ರತಾಪ್‌ ಹಾಗೂ ಪೇಟಿಂಗ್‌ ಕೆಲಸ ಮಾಡುವ ಶ್ರೀನಿವಾಸ ಮೂರ್ತಿ ಕಳೆದ ಹತ್ತು ವರ್ಷಗಳಿಂದ ಸ್ನೇಹಿತರು. ಏ.1ರಂದು ಇಬ್ಬರೂ ಕೆಲಸಕ್ಕೆ ರಜೆ ಹಾಕಿದ್ದು, ಮದ್ಯ ಸೇವಿಸಲು ನಿರ್ಧರಿಸಿದ್ದರು. ಹೀಗಾಗಿ ಶ್ರೀನಿವಾಸಮೂರ್ತಿ, ಪ್ರತಾಪ್‌ಗೆ 500 ರೂ. ಕೊಟ್ಟು ಬಿಯರ್‌ ತರುವಂತೆ ಸೂಚಿಸಿದ್ದ. ಅದರಂತೆ ಪ್ರತಾಪ್‌ ಬಿಯರ್‌ ತಂದು ಆತನಿಗೆ ಕೊಟ್ಟಿದ್ದಾನೆ. ನಂತರ ಇಬ್ಬರೂ ಬಿಯರ್‌ ಕುಡಿದಿದ್ದಾರೆ.

ಈ ವೇಳೆ ಉಳಿದ ಚಿಲ್ಲರೆ ಹಣ ಕೊಡುವಂತೆ ಶ್ರೀನಿವಾಸಮೂರ್ತಿ ಕೇಳಿದಾಗ, ಚಿಲ್ಲರೆ ಉಳಿದಿಲ್ಲ ಎಂದು ಪ್ರತಾಪ್‌ ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ಹೋದಾಗ ಪ್ರತಾಪ್‌ ಮುಖಕ್ಕೆ ಶ್ರೀನಿವಾಸಮೂರ್ತಿ ದೊಣ್ಣೆಯಿಂದ ಹೊಡೆದಿದ್ದಾನೆ. ಪರಿಣಾಮ ಪ್ರತಾಪ್‌ ಮೂಗಿನಲ್ಲಿ ರಕ್ತ ಬಂದಿದೆ. ಇದರಿಂದ ಆತಂಕಗೊಂಡ ಶ್ರೀನಿವಾಸಮೂರ್ತಿ ಸ್ಥಳೀಯರ ಸಹಾಯದಿಂದ ಪ್ರತಾಪ್‌ನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರತಾಪ್‌ಗೆ ಆಗಾಗ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಘಟನೆಯಲ್ಲಿ ಪ್ರತಾಪ್‌ ಮೂಗಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next