Advertisement

ಶಂಕ್ರನ ಪಾಪದಲ್ಲಿ ಸೆಂಟಿಮೆಂಟ್‌ ಛಾಯೆ

05:45 PM Nov 11, 2017 | |

ಮೂವರೂ ತಮ್ತಮ್ಮ ಸೊಂಟದಲ್ಲಿ ಚಾಕು ಸಿಕ್ಕಿಸಿಕೊಂಡು ಶಂಕ್ರನನ್ನು ಊರೆಲ್ಲಾ ಹುಡುಕುತ್ತಾರೆ. ಆತ ತಮಗಾಗಿಯೇ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆಂದು ಆತನಿಗಾಗಿ ಸುತ್ತುತ್ತಿರುತ್ತಾರೆ. ಇತ್ತ ಕಡೆ ಮತ್ತೂಬ್ಬ ಯುವಕ ಕೂಡಾ ಶಂಕ್ರನಿಗಾಗಿ ಹುಡುಕುತ್ತಿರುತ್ತಾನೆ. ಶಂಕ್ರ ಸಿಕ್ಕರೆ ಅದರಿಂದ ಆತನಿಗೆ ದೊಡ್ಡ ಲಾಭವಾಗುತ್ತದೆ. ಒಂದು ಜೀವ ಬದುಕುತ್ತದೆ. ಹೀಗೆ ಒಟ್ಟು ನಾಲ್ವರು ಶಂಕ್ರನ ಹುಡುಕುತ್ತಿರುತ್ತಾರೆ.

Advertisement

ಅಷ್ಟಕ್ಕೂ ಅವರು ಶಂಕ್ರನನ್ನು ಹುಡುಕಲು  ಕಾರಣವೇನು, ಅದರ ಹಿಂದಿರುವ ಕಹಾನಿ ಎಂಬುದನ್ನು ನಾವು ಹೇಳುವ ಬದಲು ನೀವೇ ನೋಡಿ. ಮೇಲ್ನೋಟಕ್ಕೆ “ಸೈಕೋ ಶಂಕ್ರ’ ಟೈಟಲ್‌ ಕೇಳಿದಾಗ ಚಿತ್ರದುದ್ದಕ್ಕೂ ರೇಪ್‌, ಮರ್ಡರ್‌, ರಕ್ತಪಾತ ಇರಬಹುದು ಎಂಬ ಭಾವನೆ ಬರೋದು ಸಹಜ. ಆದರೆ, “ಸೈಕೋ ಶಂಕ್ರ’ದಲ್ಲಿ ಅದರಾಚೆಗೂ ಸಾಕಷ್ಟು ವಿಷಯಗಳಿವೆ. ಹಾಗಂತ ಇಲ್ಲಿ ಭಯಾನಕ ದೃಶ್ಯಗಳಿಲ್ಲವೇ ಎಂದರೆ, ಒಂದೆರಡು ದೃಶ್ಯಗಳಿವೆ.

ಉಳಿದಂತೆ ನಿರ್ದೇಶಕರು ಈ ಸಿನಿಮಾಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್‌ ಟಚ್‌ ಕೊಟ್ಟಿರುವುದರಿಂದ ಇಲ್ಲಿ ರಕ್ತಪಾತಕ್ಕಿಂತ ಹೆಚ್ಚಾಗಿ ರಕ್ತಸಂಬಂಧವನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ, “ಸೈಕೋ ಶಂಕ್ರ’ನ ಕಥೆಯನ್ನು ಡೀಸೆಂಟ್‌ ಆಗಿ ತೋರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿ ನಿರ್ದೇಶಕರು “ಶಂಕ್ರ’ನಿಗೆ ಸೆಂಟಿಮೆಂಟ್‌ ಟಚ್‌ ಕೊಟ್ಟಿದ್ದಾರೆ. ಹಾಗಾಗಿ, ಬಹುತೇಕ ಸಿನಿಮಾ ಅದರ ಸುತ್ತವೇ ಸುತ್ತುತ್ತದೆ.

ತಂಗಿ ಪ್ರೀತಿ ಒಂದು ಕಡೆಯಾದರೆ, ಪ್ರೀತಿಸಿದ ಹುಡುಗಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಮತ್ತೂಂದು ಕಡೆ. ಚಿತ್ರ ಈ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಒಂದು ಹಂತಕ್ಕೆ ಆ ಎರಡೂ ಟ್ರ್ಯಾಕ್‌ಗಳು ಒಟ್ಟಿಗೆ ಸೇರುತ್ತವೆ ಮತ್ತು ಚಿತ್ರಕ್ಕೊಂದು ಅರ್ಥ ಬರುತ್ತದೆ. ಆ ಮಟ್ಟಿಗೆ “ಸೈಕೋ ಶಂಕ್ರ’ ಪ್ರಯತ್ನವನ್ನು ಮೆಚ್ಚಬೇಕು. ಜೊತೆಗೆ ಇಲ್ಲಿ ಕ್ರೈಮ್‌ ಅನ್ನು ವೈಭವೀಕರಿಸಿಲ್ಲ ಎಂಬುದು ಕೂಡಾ ಖುಷಿಯ ಸಂಗತಿ.

ಕಥೆಗೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಳ್ಳಲಾಗಿದೆ. ಚಿತ್ರ ಆರಂಭವಾಗಿ ಇಂಟರ್‌ವಲ್‌ಗೆ ಸಿನಿಮಾ ಹೋಗಿದ್ದೇ ಗೊತ್ತಾಗೋದಿಲ್ಲ. ಅಷ್ಟರ ಮಟ್ಟಿಗೆ ನಿರೂಪಣೆಯಲ್ಲಿ ವೇಗವಿದೆ. ಆದರೆ, ದ್ವಿತೀಯಾರ್ಧ ತೆರೆದುಕೊಳ್ಳುತ್ತಿದ್ದಂತೆ ಚಿತ್ರ ಕೂಡಾ ಸುತ್ತಿಕೊಳ್ಳುತ್ತದೆ. ಅದಕ್ಕೆ ಕಾರಣ ಫ್ಲ್ಯಾಶ್‌ಬ್ಯಾಕ್‌. ಸೆಂಟಿಮೆಂಟ್‌ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಫ್ಲ್ಯಾಶ್‌ಬ್ಯಾಕ್‌ ಚಿತ್ರದ ವೇಗವನ್ನು ಕಡಿಮೆಗೊಳಿಸಿದೆ.

Advertisement

ಇಲ್ಲಿನ ಕೆಲವು ದೃಶ್ಯಗಳನ್ನು ಟ್ರಿಮ್‌ ಮಾಡುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು. ಅದು ಬಿಟ್ಟರೆ “ಸೈಕೋ ಶಂಕ್ರ’ ತಣ್ಣಗೆ ಸಾಗುವ ಸಿನಿಮಾ. ಹೆಚ್ಚು ಏರಿಳಿತಗಳಿಲ್ಲದೇ, ಪ್ರೇಕ್ಷಕನ ತಾಳ್ಮೆ ಪರೀಕ್ಷಿಸದೇ ಸಾಗುವ “ಸೈಕೋ ಶಂಕ್ರ’ ಶುಗರ್‌ಲೆಸ್‌ ಟೀಯಂತೆ. ಹೆಚ್ಚು ಅಬ್ಬರವಿಲ್ಲದೇ ಕೂಲ್‌ ಆಗಿ ಸಿನಿಮಾ ನೋಡುವವರಿಗೆ “ಸೈಕೋ ಶಂಕ್ರ’ ಹಿಡಿಸಬಹುದು. ಅಬ್ಬರ, ಬಿಲ್ಡಪ್‌ ಬಯಸುವವರಿಗೆ ರುಚಿಸೋದು ಕಷ್ಟ. ಹಾಗಂತ ಚಿತ್ರತಂಡದ ಪ್ರಯತ್ನವನ್ನು ತೆಗೆದುಹಾಕುವಂತಿಲ್ಲ.

ಸೆಂಟಿಮೆಂಟ್‌ ಹಿನ್ನೆಲೆಯಲ್ಲಿ ಕಥೆ ಕಟ್ಟಿಕೊಟ್ಟಿರುವ ರೀತಿ ಇಷ್ಟವಾಗುತ್ತದೆ. ಚಿತ್ರದಲ್ಲಿ ಪ್ರಣವ್‌ ಹೀರೋ. ಮೊದಲ ಬಾರಿಗೆ ನಟಿಸಿರುವ ಅವರು ಇಷ್ಟವಾಗುತ್ತಾರೆ. ನವರಸನ್‌ ಇಲ್ಲಿ “ಸೈಕೋ ಶಂಕ್ರ’ನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಡೈಲಾಗ್‌ ಇಲ್ಲ, “ಆ್ಯಕ್ಷನ್‌’ ಅಷ್ಟೇ. ಯಶಸ್‌ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಶರತ್‌ ಲೋಹಿತಾಶ್ವ ಅವರಿಲ್ಲಿ ಪೊಲೀಸ್‌ ಆಫೀಸರ್‌. ಏನೇ ಕೆಲಸ ಮಾಡುವುದಾದರೂ ಅದರಲ್ಲಿ ಲಾಭ ಬಯಸುವ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. 

ಚಿತ್ರ: ಸೈಕೋ ಶಂಕ್ರ
ನಿರ್ಮಾಣ: ಪ್ರಭಾಕರ್‌ ಎಸ್‌, ಮಂಜುಳ ಪಿ
ನಿರ್ದೇಶನ: ಪುನೀತ್‌ ಆರ್ಯ
ತಾರಾಗಣ: ಪ್ರಣವ್‌, ನವರಸನ್‌, ಯಶಸ್‌, ಶರತ್‌ ಲೋಹಿತಾಶ್ವ ಮುಂತಾದವರು

– ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next