Advertisement

ಇಂದ್ರಿಯ ಸಂಯಮ

08:16 PM Mar 13, 2020 | Team Udayavani |

ಬ್ರಹ್ಮಚರ್ಯ ಎಂಬುದು ಭಾರತೀಯರ ಜೀವನ ವ್ಯವಸ್ಥೆಯ ಮೊದಲನೇ ಹಂತ. ಮುಂಬರುವ ಸಂಸಾರದ ಸುಖ- ಭೋಗಗಳ ಮೊದಲು ಶಿಸ್ತು, ಸಂಯಮ ಸಾಧಿಸುವ ಕಾಲ. ಜೀವನದ ಗುರಿಯತ್ತ ಸಾಗಲು ಭದ್ರ ತಳಹದಿ ಹಾಕಿಕೊಡುವ ಘಟ್ಟವೇ ಬ್ರಹ್ಮಚರ್ಯ. ಯಾವುದಾ ಗುರಿ ಎಂಬ ಪ್ರಶ್ನೆ ಕಾಡುತ್ತೆ. ಈ ದೇಹ ಬಟ್ಟೆಯಂತೆ; “ನಾನು’ ಎನ್ನುವ ನಿಜವಾದ ಪದಾರ್ಥವೆಂದರೆ ನಮ್ಮೊಳಗಿನ ಚೈತನ್ಯ; ಈ ಚೈತನ್ಯದ ಅದ್ಭುತವಾದ, ಆನಂದಭರಿತವಾದ ಸ್ವಾನುಭವ ಪಡೆಯುವುದೇ ಬ್ರಹ್ಮಚರ್ಯದ ಗುರಿ.

Advertisement

ನಾವು ಊಹಿಸಿಲು ಸಾಧ್ಯವಾದ ತುಂಬಾ ದೊಡ್ಡ ಸುಖಕ್ಕಿಂತಲೂ, ಕೋಟಿ ಕೋಟಿ ಪಾಲು ಆನಂದ ಕೊಡುವಂಥದ್ದು ಇದೆಂಬುದು ಭಾರತದ ಋಷಿ- ಮುನಿಗಳ ಅನುಭವದ ಮಾತು. ಆ ಗುರಿ ಮುಟ್ಟಲು ಇಂದ್ರಿಯಗಳ ಸಂಯಮ ಅವಶ್ಯ. ಚಿತ್ತದ ಅಲೆಗಳನ್ನು ಶಾಂತಗೊಳಿಸಬೇಕು. ಇಂದು ಮೊಬೈಲೇ ನಮ್ಮ ಜೀವ; ಒಂದು ನಿಮಿಷ ಬಿಟ್ಟಿರಲಾರೆವು. ಮೊಬೈಲ್‌ ಎಲ್ಲಿಟ್ಟೆ ಎಂದು ಮರೆತುಹೋಯಿತು. ಹುಡುಕಲು ಮತ್ತೂಂದು ಮೊಬೈಲ್‌ನಿಂದ ಕರೆ ಮಾಡಿ,

ಎಲ್ಲಿ ಸದ್ದು ಬರುತ್ತೆ ಎಂದು ಮನೆಯಿಡೀ ಹುಡುಕುತ್ತೇವೆ. ಆದರೆ, ಮೊಬೈಲ್‌ ವಾಲ್ಯೂಮ್‌ ತುಂಬಾ ಕಡಿಮೆ; ಮನೆಯಲ್ಲಾದರೋ ದೊಡ್ಡ ಸಮಾರಂಭ; ಭಾರೀ ಗಲಾಟೆ. ಮನೆಯಿಡೀ ಜನ, ಮಕ್ಕಳ ಕೂಗಾಟ. ಮೊಬೈಲ್‌ ಸದ್ದು ಹೇಗೆತಾನೇ ಕೇಳೀತು? ಮೊಬೈಲ್‌ ಮನೇಲಿ ಇಲ್ಲವೇ ಇಲ್ಲ ಎಂದು ಹೇಳುವರೂ ಉಂಟು. ನಮ್ಮ ಪರಿಸ್ಥಿತಿಯೂ ಹೀಗೆಯೇ ಆಗಿದೆ. ನಮ್ಮೊಳಗೆ ಇಂದ್ರಿಯಗಳ ಗಲಾಟೆ ಜೋರಾಗಿದೆ. ಆಲೋಚನೆಗಳು, ಆತಂಕಗಳು ಅಲೆಯಲೆಯಾಗಿ ಆವರಿಸುತ್ತಿವೆ. ಇದೆಲ್ಲದರ ನಡುವೆ “ನಾನು’ ಎಂಬ ನಿಜ ಚೈತನ್ಯವು ನಮ್ಮೊಳಗೇ ಮಾಡುತ್ತಿರುವ ನಾದ ಕೇಳಿಸುವುದು ಅಸಾಧ್ಯ.

ಕೇಳದ ಕಾರಣದಿಂದ ಈ ದೇಹಬಿಟ್ಟು ಬೇರೆ ಚೈತನ್ಯವೇ ಇಲ್ಲವೆಂದು ಹೇಳುತ್ತಾರೆ. ಆ ನಾದ ಕೇಳಬೇಕಾದರೆ, ಇಂದ್ರಿಯಗಳ ಗಲಾಟೆಯನ್ನು ಅಡಗಿಸಬೇಕು. ಬುಗ್ಗೆ ಬುಗ್ಗೆಯಾಗಿ ಚಿಮ್ಮುವ ಯೋಚನೆ- ಆಲೋಚನೆಗಳನ್ನು ನೀಗಿಸಬೇಕು. ಆಗ ನಮ್ಮೊಳಗೆ ಚೈತನ್ಯ ಮಾಡುವ “ಪ್ರಣವ’ ನಾದವನ್ನು ಕೇಳಬಹುದು ಎಂದು ಹೇಳುತ್ತಿದ್ದರು ಶ್ರೀರಂಗ ಮಹಾಗುರುಗಳು. ಪರಬ್ರಹ್ಮವೆಂಬ ಆ ಒಳ ಚೈತನ್ಯವನ್ನು ಅನುಸರಿಸಿ ನಡೆಯುವುದೇ ಬ್ರಹ್ಮಚರ್ಯ.

* ಡಾ. ಮೋಹನ್‌ ರಾಘವನ್‌, ವಿದ್ವಾಂಸರು, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next