ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರಕ್ಕೆ ಹಲವು ಕಡೆಗಳಿಂದ ಭಕ್ತರು ಬರುತ್ತಿದ್ದು ಅವರ ನಿರೀಕ್ಷೆಯಂತೆ ಮಳೆಗಾಲದಲ್ಲೂ ನದಿಗಳ ಸಂಗಮದಲ್ಲೇ ಪಿಂಡ ಪ್ರದಾನ ನಡೆಸಲು ಅವಕಾಶ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ತಿಳಿಸಿದರು.
ಅವರು ಶ್ರೀ ಸಹಸ್ರಲಿಂಗೇಶ್ವರ ದೇವರು, ಮಹಾಕಾಳಿ ಅಮ್ಮನವರ ದರ್ಶನ ಪಡೆದು ಸಂಗಮ ಸ್ಥಳವನ್ನು ವೀಕ್ಷಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಉಪ್ಪಿನಂಗಡಿಯ ಸಂಗಮ ಕ್ಷೇತ್ರವನ್ನು ಕೂಡಲ ಸಂಗಮದಂತೆ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಬೇಕೆಂಬ ಶಾಸಕ ಅಶೋಕ್ ಕುಮಾರ್ ಕನಸಿನ ಬಗ್ಗೆ ಉತ್ತರಿಸಿದ ಸಚಿವರು, 350 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಿ ಶಾಸಕರು ಈಗಾಗಲೇ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಈಗ ನಮ್ಮ ಇಲಾಖೆಗೆ ಬಂದಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದ ಬಳಿಕ ಯೋಜನೆಯನ್ನು ಅನುಷ್ಠಾನಿಸಲಾಗುವುದು ಎಂದರು.
ಸಚಿವರಿಗೆ ಯೋಜನೆಯ ಬಗ್ಗೆ ವಿವರಿಸಿದ ಶಾಸಕರು, ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಯಾತ್ರಿಕರು ಸಂಗಮ ಕ್ಷೇತ್ರಕ್ಕೂ ಬಂದು ಹೋಗುತ್ತಾರೆ. ಇಲ್ಲಿ ನದಿಯ ಆಳದಲ್ಲಿರುವ ಉದ್ಭವಲಿಂಗದ ಬಳಿ ವರ್ಷದ ಎಲ್ಲ ದಿನಗಳಲ್ಲೂ ಹೋಗಿ ಪೂಜೆ ನಡೆಸಲು ಅವಕಾಶವಾಗುವಂತೆ ಮಾಡಬೇಕು ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಮಾಜಿ ಸದಸ್ಯ ರಾಧಾಕೃಷ್ಣ ನಾೖಕ್, ವ್ಯವಸ್ಥಾಪಕ ವೆಂಕಟೇಶ್ ಎಂ. ಮೊದಲಾದವರಿದ್ದರು.
ಕೆಸರಲ್ಲಿ ಹೂತ ಸರಕಾರಿ ಕಾರು!
ಕಾಮಗಾರಿ ಗುತ್ತಿಗೆದಾರರ ದುಡುಕಿನ ನಿರ್ಧಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸರಿಯಾಗಿ ಮಾಹಿತಿ ನೀಡದ್ದ ರಿಂದ ಸಚಿವರೊಂದಿಗೆ ಬಂದ ಕಾರು ಹಾಗೂ ಶಾಸಕರ ಸಹಿತ ಹಲವರ ಕಾಲುಗಳು ಕೆಸರಲ್ಲಿ ಹೂತು ಹೋದ ಪ್ರಸಂಗ ಬಿಳಿಯೂರಿನ ಕಿಂಡಿ ಅಣೆಕಟ್ಟು ಬಳಿ ನಡೆಯಿತು.