Advertisement

ಅಚ್ಚರಿ ಮೂಡಿಸಿದ ಘಟನೆ; ಸಂಗಮ ಕ್ಷೇತ್ರ ಪಜಿರಡ್ಕಕ್ಕೆ ಬಂದ ಬಸವ

03:08 PM Jan 17, 2023 | Team Udayavani |

ಬೆಳ್ತಂಗಡಿ: ಕಲ್ಮಂಜ ಗ್ರಾಮಕ್ಕೆ ಒಳಪಟ್ಟ ಇತಿಹಾಸ ಪ್ರಸಿದ್ಧ ಮಾಗಣೆ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕ ಬ್ರಹ್ಮಕಲಶೋತ್ಸವ ದಿನ ನಿಗದಿಯಾಗುತ್ತಿದ್ದಂತೆ ಕ್ಷೇತ್ರಕ್ಕೆ ಬಸವನ ಆಗಮನವಾಗಿರುವುದು ಅಚ್ಚರಿ ಮೂಡಿಸಿದೆ.

Advertisement

ಜ. 31ರಿಂದ ಫೆ. 6ರ ವರೆಗೆ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಿಗದಿಯಾಗಿದೆ. ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಪಜಿರಡ್ಕ ದೇವಸ್ಥಾನಕ್ಕೆ ಹತ್ತಿರದ ಪ್ರದೇಶಗಳಲ್ಲಿ ಈವರೆಗೆ ಕಂಡಿರದ ವಾರಸುದಾರರಿಲ್ಲದ ಬಸವ ರಾತ್ರಿ ಹೊತ್ತು ಓಡಾಡುವುದು ಗೋಚರಿಸಿದೆ.

ಸುಮಾರು ಎರಡು-ಮೂರು ತಿಂಗಳಿನಿಂದ ಬಸವ ಊರಿನಲ್ಲಿ ಓಡಾಟ ನಡೆಸುತ್ತಿದ್ದರೂ, ಯಾರಿಗೂ ಈ ಬಗ್ಗೆ ಗೋಚರಕ್ಕೆ ಬಂದಿರಲಿಲ್ಲ. ಆದರೆ ಬ್ರಹ್ಮಕಲಶೋತ್ಸವ ಸಮೀಪಿಸುತ್ತಿರುವಂತೆ ದೇವಸ್ಥಾನದ ಸುತ್ತಮುತ್ತ ಮನೆಗಳಿಗೆ ಹೋಗಿ ಅಲ್ಲಿ ಹುಲ್ಲು ಆಹಾರ ಸೇವಿಸುತ್ತಾ ಸುತ್ತಾಡುತ್ತಿದೆ. ಆದರೆ ಈವರೆಗೆ ಇದು ಯಾರಿಗೂ ಯಾವುದೇ ತೊಂದರೆ ನೀಡಿಲ್ಲ ಮತ್ತು ಇದರ ವಾರಸುದಾರರು ಯಾರೆಂದು ತಿಳಿಯಲ್ಪಟ್ಟಿಲ್ಲ. ಇದೀಗ ಅದಕ್ಕೆ ನಂದಿ ಎಂದು ಭಕ್ತರು ಹೆಸರು ಇರಿಸಿದ್ದಾರೆ.

100 ವರ್ಷಗಳ ಹಿಂದೆ ಸಂಭವಿಸಿತ್ತು ಪ್ರವಾಹ
ಸಂಗಮ ಕ್ಷೇತ್ರ ಪಜಿರಡ್ಕಕ್ಕೆ 800 ವರ್ಷಗಳ ಇತಿಹಾಸವಿದೆ. ಇದು ನೇತ್ರಾವತಿ ಮತ್ತು ಮೃತ್ಯುಂಜಯ ನದಿ ಸಂಗಮ ಕ್ಷೇತ್ರವಾಗಿದೆ. ಹಿಂದೆ ಕ್ಷೇತ್ರದಲ್ಲಿ ಬಸವ ಉತ್ಸವ ರಥೋತ್ಸವಗಳು ನಡೆಯುತ್ತಿತ್ತಂತೆ. ಆದರೆ 1923ರಲ್ಲಿ ಪ್ರವಾಹ ಸಂಭವಿಸಿ ಕ್ಷೇತ್ರದ ರಥ ಸೇರಿದಂತೆ ಬಹುತೇಕ ಸೊತ್ತುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು ಎಂಬ ಉಲ್ಲೇಖವಿದೆ. ಬಳಿಕ ರಥೋತ್ಸವ ನಿಂತು ಹೋಗಿತ್ತಂತೆ. 2019ರಲ್ಲಿ ಮತ್ತೆ ದೇವಸ್ಥಾನ ಪ್ರವಾಹಕ್ಕೆ ತುತ್ತಾಗಿತ್ತು. ಮೊದಲನೆಯ ಪ್ರವಾಹ ಸಂಭವಿಸಿ ಪ್ರಸಕ್ತ 100 ವರ್ಷದ ಬಳಿಕ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿರುವ ಸಂದರ್ಭ ಬಸವ ಕಂಡುಬಂದಿರುವುದು ಕಾಕತಾಳೀಯ ಎಂಬಂತಾಗಿದೆ.

ಅಚ್ಚರಿ ಮೂಡಿಸಿದ ಘಟನೆ
ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ಇಂತಹದ್ದೊಂದು ವಿಶೇಷ ನಡೆದಿದ್ದು ಕುತೂಹಲ ಮೂಡಿಸಿದೆ. ಈ ಬಸವ ಯಾರಿಗೂ ತೊಂದರೆ ಮಾಡುತ್ತಿಲ್ಲ. ಆದರೆ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಬ್ರಹ್ಮಕಲಶೋತ್ಸವ ಸಂದರ್ಭ ಈ ಘಟನೆ ಊರಿನ ಮಂದಿಗೆ ಅಚ್ಚರಿ ಮೂಡಿಸಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ತುಕರಾಮ್‌ ಸಾಲ್ಯಾನ್‌ ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next