Advertisement

ಪ್ರಯಾಣಿಕರ ಎಣಿಸಲು ಸೆನ್ಸರ್‌!

12:06 PM Jul 23, 2018 | Team Udayavani |

ಬೆಂಗಳೂರು: ಟಿಕೆಟ್‌ರಹಿತ ಪ್ರಯಾಣದಿಂದ ಆಗುತ್ತಿರುವ ಆದಾಯ ಸೋರಿಕೆ ತಡೆಗೆ ಬಿಎಂಟಿಸಿ ಬಸ್‌ಗಳಲ್ಲಿ ಸೆನ್ಸರ್‌ ಆಧಾರಿತ ಪ್ರಯಾಣಿಕರ ಗಣತಿ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದ್ದು, ದೇಶದಲ್ಲಿ ಮೊಟ್ಟಮೊದಲ ಬಾರಿ ಈ ಪ್ರಯೋಗ ನಡೆಯುತ್ತಿದೆ.

Advertisement

ಬಸ್‌ಗಳ ಪ್ರವೇಶ ದ್ವಾರಗಳಲ್ಲಿ ಈ ಸೆನ್ಸರ್‌ ಆಧಾರಿತ ಗಣತಿ ಯಂತ್ರವನ್ನು ಅಳವಡಿಸಿ, ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಲೆಕ್ಕವನ್ನು ದಾಖಲಿಸಲಾಗುವುದು. ಈ ಮೂಲಕ ಉದ್ದೇಶಿತ ಬಸ್‌ನಲ್ಲಿ ಇಡೀ ದಿನ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಹಾಗೂ ನಿರ್ವಾಹಕರ ಬಳಿ ಸಂಗ್ರಹವಾದ ಮೊತ್ತವನ್ನು ತಾಳೆ ಹಾಕಲಾಗುವುದು. ಇದನ್ನು ಆಧರಿಸಿ ಟಿಕೆಟ್‌ ನೀಡದೆ, ಸಂಸ್ಥೆಗೆ ನಷ್ಟ ಉಂಟುಮಾಡುವ ನಿರ್ವಾಹಕರ ವಿರುದ್ಧ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ. 

ಪ್ರಸ್ತುತ ದೂರುಗಳನ್ನು ಆಧರಿಸಿ ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ಗಳು ಆಯ್ದ ಬಸ್‌ಗಳನ್ನು ತಪಾಸಣೆ ಮಾಡಿ, ಟಿಕೆಟ್‌ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿ, ಆಯಾ ಬಸ್‌ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದರಿಂದ ಸಂಪೂರ್ಣವಾಗಿ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಜತೆಗೆ ಕೆಲವೇ ಬಸ್‌ಗಳನ್ನು “ಟಾರ್ಗೆಟ್‌’ ಮಾಡಲಾಗುತ್ತದೆ ಎಂಬ ಅಪಸ್ವರ ಕೂಡ ಅಲ್ಲಲ್ಲಿ ಕೇಳಿಬರುತ್ತದೆ. ಈಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಆದಾಯ ಸೋರಿಕೆಗೆ ಸಂಪೂರ್ನ ಬ್ರೇಕ್‌ ಹಾಕಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ನಿರ್ಭಯಾ ನಿಧಿ ಬಳಕೆ: “ನಿರ್ಭಯಾ ನಿಧಿ’ ಅಡಿ ಬಿಎಂಟಿಸಿಗೆ 56 ಕೋಟಿ ರೂ. ಬಂದಿದ್ದು, ಇದರಲ್ಲಿ 26 ಕೋಟಿ ರೂ.ಗಳನ್ನು ಬಸ್‌ಗಳಲ್ಲಿ ಸಿಸಿಟಿವಿ, ಎಸ್‌ಒಎಸ್‌ ಸ್ಮಾಟ್‌ ವಾಚ್‌ ಬಟನ್‌, ಉಚಿತ ವೈ-ಫೈ ಜತೆಗೆ ಸೆನ್ಸರ್‌ ಆಧಾರಿತ ಯಂತ್ರಗಳನ್ನೂ ಅಳವಡಿಸಲಾಗುತ್ತದೆ.

Advertisement

ಈ ಯಂತ್ರವು ಇನಾ#†ರೆಡ್‌ ವಿಕಿರಣದಿಂದ ಬಸ್‌ ಪ್ರವೇಶಿಸುವ ವ್ಯಕ್ತಿಯ ಇಮೇಜ್‌ ಸೆರೆಹಿಡಿಯುತ್ತದೆ. ಈ ಮಾಹಿತಿಯನ್ನು ಸಾಫ್ಟ್ವೇರ್‌ಗೆ ಕಳುಹಿಸುತ್ತದೆ. ಎರಡು ಬಸ್‌ಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಲು ಉದ್ದೇಶಿಸಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.  

ಸಮರ್ಪಕ ಅನುಷ್ಠಾನ ಅನುಮಾನ?: ಬೇರೆ ದೇಶಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆ ಆಗಿದ್ದರೂ, ಅಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ನಮ್ಮಲ್ಲಿನ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸ ಇದೆ. ವಿದೇಶಗಳಲ್ಲಿ ಬಸ್‌ನಲ್ಲಿ ನಿರ್ದಿಷ್ಟ ಪ್ರಯಾಣಿಕರು ಸಂಚರಿಸುತ್ತಾರೆ. ನಿರ್ವಾಹಕ ಇರುವುದೇ ಇಲ್ಲ. ನಮ್ಮಲ್ಲಿನ ಬಸ್‌ಗಳು ತುಂಬಿತುಳುಕುತ್ತವೆ.

ಜತೆಗೆ ನಿರ್ವಾಹಕರೇ ಅನೇಕ ಬಾರಿ ಹತ್ತಿ-ಇಳಿಯುವುದು ಸರ್ವೇಸಾಮಾನ್ಯ. ಈ ದೃಷ್ಟಿಯಿಂದ ಉದ್ದೇಶಿತ ತಂತ್ರಜ್ಞಾನ ಎಷ್ಟರಮಟ್ಟಿಗೆ ಫ‌ಲಪ್ರದ ಆಗುತ್ತದೆ ಎಂಬುದು ಗೊತ್ತಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಅನುಮಾನವನ್ನೂ ವ್ಯಕ್ತಪಡಿಸುತ್ತಾರೆ. 

ಸದ್ಯ ಟಿಕೆಟ್‌ರಹಿತ ಪ್ರಯಾಣದಲ್ಲಿ ಸೋರಿಕೆ ಪ್ರಮಾಣ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧದ ಕಾರ್ಯಾಚರಣೆಯಲ್ಲಿ ದಾಖಲಿಸಲಾದ ಪ್ರಕರಣಗಳು ಮತ್ತು ದಂಡವನ್ನು ಆಧರಿಸಿ ಶೇ. 4ರಿಂದ 5ರಷ್ಟು ಆದಾಯ ಸೋರಿಕೆ ಆಗುತ್ತಿರಬಹುದು. ಹಾಗೊಂದು ವೇಳೆ ಈ ತಂತ್ರಜ್ಞಾನ ಜಾರಿಗೊಳಿಸಿದರೆ, ಈ ಸೋರಿಕೆಯನ್ನು ಶೇ. 95ರಷ್ಟು ತಡೆಗಟ್ಟಬಹುದು ಎಂದೂ ಅವರು ಹೇಳುತ್ತಾರೆ.

ಈ ಮಧ್ಯೆ ಯೋಜನೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ಕೂಡ ನಡೆದಿದೆ. ಬಿಎಂಟಿಸಿ ವ್ಯಾಪ್ತಿಯಲ್ಲಿ ಸುಮಾರು ಆರು ಸಾವಿರ ಬಸ್‌ಗಳು ಇದೆ. ಪ್ರಯೋಗ ಯಶಸ್ವಿಯಾದರೆ, ಸಾವಿರ ಬಸ್‌ಗಳಲ್ಲಿ ಅಳವಡಿಸುವ ಯೋಚನೆ ಇದೆ ಎಂದು ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಕಾರ್ಯಾಚರಣೆ ಹೀಗೆ: ಸೆನ್ಸರ್‌ ಆಧಾರಿತ ಪ್ರಯಾಣಿಕರ ಗಣತಿ ಮಾಡುವ ತಂತ್ರಜ್ಞಾನವು ಕ್ಷ-ಕಿರಣ ಇದ್ದಂತೆ. ಈ ತಂತ್ರಜ್ಞಾನ ಅಳವಡಿಸಿದ ಬಸ್‌ನಲ್ಲಿ ವ್ಯಕ್ತಿ ಪ್ರವೇಶಿಸುತ್ತಿದ್ದಂತೆ, ಇನಾ#†ರೆಡ್‌ ವಿಕಿರಣದ ಮೂಲಕ ಸೆರೆಹಿಡಿದು ಸಾಫ್ಟ್ವೇರ್‌ಗೆ ಕಳುಹಿಸುತ್ತದೆ. ಆ ವ್ಯಕ್ತಿ ಇಳಿದ ತಕ್ಷಣ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿತ ಆಗುತ್ತದೆ. ಉದಾಹರಣೆಗೆ ಐಷಾರಾಮಿ ಹೋಟೆಲ್‌ನಲ್ಲಿ ಹೋಗುವಾಗ, ಸೆನ್ಸರ್‌ ಆಧಾರಿತ ಅಟೋಮೆಟಿಕ್‌ ಪ್ರವೇಶ ದ್ವಾರಗಳು ಇರುತ್ತದೆ. ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿ ಈ ವ್ಯವಸ್ಥೆ ಕೆಲಸ ಮಾಡುತ್ತದೆ. 

ವೈ-ಫೈ ಮಾನಿಟರ್‌: ಅಷ್ಟೇ ಅಲ್ಲ, ಬಸ್‌ಗಳಲ್ಲಿ ಉಚಿತ ವೈ-ಫೈ ಜತೆಗೆ ಮಾನಿಟರ್‌ಗಳನ್ನು ಕೂಡ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಮನರಂಜನೆ ಜತೆಗೆ ನಿಗಮಗಳಿಗೆ ಜಾಹಿರಾತು ಪ್ರಸಾರದ ಮೂಲಕ ಆದಾಯವೂ ಬರಲಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next