– ಹೀಗೆ ಹೇಳಿದ್ದು ನಿರ್ಮಾಪಕ ಶಮಂತ್. ಅವರು ಹೇಳಿಕೊಂಡಿದ್ದು ತಮ್ಮ ನಿರ್ಮಾಣದ “ಆದಿ ಪುರಾಣ’ ಬಗ್ಗೆ. ಹೇಳ್ಳೋಕೆ ಕಾರಣ, ಸೆನ್ಸಾರ್ ಮಂಡಳಿ ಕೊಟ್ಟ “ಎ’ ಪ್ರಮಾಣ ಪತ್ರ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟ ಸಂಬಂಧ ನಿರ್ಮಾಪಕ ಶಮಂತ್, “ನಾವೇನು ಅಶ್ಲೀಲತೆಯ ಚಿತ್ರ ಮಾಡಿಲ್ಲ. ಆದರೂ “ಎ’ ಪ್ರಮಾಣ ಪತ್ರ ಕೊಡಲಾಗಿದೆ. ಸೆನ್ಸಾರ್ ಮಂಡಳಿಯಿಂದಾಗಿ ಚಿತ್ರ ತಡವಾಗಿದೆ. ಇಲ್ಲವಾಗಿದ್ದರೆ ಎರಡು ತಿಂಗಳ ಹಿಂದೆಯೇ ಚಿತ್ರ ಬಿಡುಗಡೆಯಾಗುತ್ತಿತ್ತು. “ಎ’ ಪ್ರಮಾಣ ಪತ್ರ ಕೊಡುವಂಥದ್ದೇನೂ ಇರಲಿಲ್ಲ. 52 ಕಟ್ಸ್ ಹೇಳಿದರೆ, ಪ್ರೇಕ್ಷಕರಿಗೆ ಸಿನಿಮಾ ತೋರಿಸುವುದಾದರೂ ಹೇಗೆ? ಕೊನೆಗೆ ನಾವು ರಿವೈಸಿಂಗ್ ಕಮಿಟಿಗೆ ಹೋಗಬೇಕಾದ ಅನಿವಾರ್ಯತೆ ಬಂತು. ಇಲ್ಲಿ ಹೊಸಬರಿಗೆ ಒಂದು ಕಾನೂನು, ಹಳಬರಿಗೊಂದು ಕಾನೂನು ಇದೆ. ಇದನ್ನು ಕೇಳುವರ್ಯಾರು? ನಮ್ಮಂತಹ ಹೊಸಬರಿಗೆ ಬೆಂಬಲ ಸಿಗದಿದ್ದರೆ ಹೇಗೆ? ಎಂದು ಪ್ರಶ್ನಿಸಿದ ಶಮಂತ್, ಅಕ್ಟೋಬರ್ 5 ರಂದು ಸುಮಾರು 70 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಝೇಂಕಾರ್ ಮ್ಯೂಸಿಕ್‌ನ ಭರತ್ ಅವರು ಚಿತ್ರ ವಿತರಣೆ ಮಾಡುತ್ತಿದ್ದಾರೆ. ಇನ್ನು, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಂದು ಪ್ರೇಕ್ಷಕರಿಗೆ ಉಚಿತ ಸಿನಿಮಾ ತೋರಿಸುವ ಯೋಚನೆ ಇದೆ. ಅವರೆಲ್ಲ ಚಿತ್ರ ನೋಡಿ, ಇದು ಅಶ್ಲೀಲತೆಯ ಚಿತ್ರವೋ, ಈಗಿನ ಟ್ರೆಂಡ್‌ಗೆ ಸರಿಯಾಗಿರುವ ಚಿತ್ರವೋ ಎಂದು ಹೇಳಲಿದ್ದಾರೆ’ ಅಂದರು ಶಮಂತ್.
Advertisement
ನಿರ್ದೇಶಕ ಮೋಹನ್ ಕಾಮಾಕ್ಷಿ ಅವರಿಗೆ ಇದು ಮೊದಲ ಚಿತ್ರ. ಸಹಜವಾಗಿಯೇ ಅವರಿಗೆ ಖುಷಿ ಇದೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೇಲರ್ ಸದ್ದು ಮಾಡಿರುವುದರಿಂದ ನಿರ್ದೇಶಕರಿಗೆ ಗೆಲ್ಲುವ ಸೂಚನೆಯೂ ಸಿಕ್ಕಿದೆ. ಚಿತ್ರ 2016, ಅಕ್ಟೋಬರ್ 6 ರಂದು ಶುರುವಾಗಿ, 2018 ರ ಅಕ್ಟೋಬರ್ 5 ರಂದು ಬಿಡುಗಡೆಯಾಗುತ್ತಿದೆ. ಹೊಸಬರಿಗೆ ಸಿನಿಮಾ ಮಾಡುವುದು ಕಷ್ಟವೇನಲ್ಲ. ಆದರೆ, ಸೆನ್ಸಾರ್ ಮಂಡಳಿಯಿಂದ ಮಾತ್ರ ಒಂದಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. 52 ಕಟ್ ಹೇಳಿದರೆ, ನಮ್ಮಂತಹವರು ಸಿನಿಮಾ ತೋರಿಸುವುದಾದರೂ ಹೇಗೆ? ಇಲ್ಲಿ ವಲ್ಗರ್ ಇಲ್ಲ. ಕಥೆಗೆ ಪೂರಕ ಎನಿಸುವ ದೃಶ್ಯಗಳು, ಡೈಲಾಗ್‌ಗಳಿವೆ. ಆದರೆ, ಸೆನ್ಸಾರ್ ಮಂಡಳಿಗೆ ಮಾತ್ರ ಅದು ಅಸಹ್ಯವಾಗಿ ಕಾಣುತ್ತದೆ. ಹೊಸ ತಂಡ ಕಟ್ಟಿಕೊಂಡು ಹೊಸಬಗೆಯ ಚಿತ್ರ ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂಬುದು ನಿರ್ದೇಶಕ ಮೋಹನ್ ಮಾತು.