ಮುಂಬಯಿ : 2019ರ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡಿರುವ ಮೋದಿ ಸುನಾಮಿಯ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 623ಕ್ಕೂ ಅಧಿಕ ಅಂಕಗಳ ಭರ್ಜರಿ ಏರಿಕೆಯೊಂದಿಗೆ, ದಾಖಲೆಯ 39,434.72 ಅಂಕಗಳ ಮಟ್ಟದಲ್ಲಿ ಭಾರೀ ಭರವಸೆಯೊಂದಿಗೆ ಕೊನೆಗೊಳಿಸಿತು.
ಹಾಲಿ ಚುನಾವಣೆಯಲ್ಲಿ 302 ಲೋಕಸಭಾ ಸೀಟುಗಳನ್ನು ಬಾಚಿಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಿಚ್ಚಳ ಬಹುಮತ ಗಳಿಸಿರುವುದರಿಂದ ಹೊಸ ಸರಕಾರಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ಸುಧಾರಣೆಗಳನ್ನು ತರಲು ಸಾಧ್ಯವಾಗುವುದೆಂದು ಹೂಡಿಕೆದಾರರು ವಿಶ್ವಾಸ ತಳೆದಿರುವುದೇ ಮುಂಬಯಿ ಶೇರು ಪೇಟೆಯ ದಾಖಲೆಯ ಎತ್ತರದ ಜಿಗಿತಕ್ಕೆ ಕಾರಣವಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 187 ಅಂಕಗಳ ಜಿಗಿತವನ್ನು ದಾಖಲಿಸಿ ಹೊಸ ಸಾರ್ವಕಾಲಿಕ ಎತ್ತರದ 11,844.10 ಅಂಕಗಳ ಮಟ್ಟವನ್ನು ತಲುಪಿತು.
ಈ ವಾರ ಸೆನ್ಸೆಕ್ಸ್ 1,503 ಅಂಕಗಳ ಏರಿಕೆಯನ್ನು ದಾಖಲಿಸಿದೆಯಾದರೆ ನಿಫ್ಟಿ 437 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿದೆ.
ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಶೇ.5.09ರ ಏರಿಕೆಯನ್ನು ಕಂಡಿತು. ಇದನ್ನು ಅನುಸರಿಸಿದ ಲಾರ್ಸನ್, ಭಾರ್ತಿ ಏರ್ ಟೆಲ್, ವೇದಾಂತ, ಟಾಟಾ ಮೋಟರ್ ಶೇರುಗಳು ಶೇ.4.60 ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,680 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,834 ಶೇರುಗಳು ಮುನ್ನಡೆ ಸಾಧಿಸಿದವು; 689 ಶೇರುಗಳು ಹಿನ್ನಡೆಗೆ ಗುರಿಯಾದವು; 157 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.